Wednesday, May 15, 2024
spot_img
More

    Latest Posts

    ಬೆಂಗಳೂರು : ರಾಜ್ಯದ 14 ಕ್ಷೇತ್ರಗಳಲ್ಲಿ ಉತ್ಸಾಹದಿಂದ ಮತ ಚಲಾವಣೆ,

    ಬೆಂಗಳೂರು : 14 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದಿರುವ ಮೊದಲ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಮತಯಂತ್ರ ದೋಷ, ವಿವಿ ಪ್ಯಾಡ್ ಸಮಸ್ಯೆಗಳಂತ ಒಂದೆರೆಡು ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಸುಗಮವಾಗಿ ಸಾಗಿದೆ.ಆದರೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಮಾಡುವ ವಿಚಾರಕ್ಕೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಗಲಾಟೆಯಾಗಿದೆ. ಮೂಲ ಸೌಕರ್ಯ ಒದಗಿಸುವವರೆಗೆ ಮತದಾನ ಮಾಡುವುದಿಲ್ಲ ಎಂದಿದ್ದರೂ ಸಹ ಕೆಲ ಗ್ರಾಮಸ್ಥರನ್ನು ಮತದಾನಕ್ಕೆ ಕರೆತಂದಿದ್ದು, ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮತಕೇಂದ್ರದ ಮೇಲೆ ದಾಳಿ ಮಾಡಿದ್ದಾರೆ.ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಹದೇಶ್ವರಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕರಿಸಲಾಗಿದೆ. ಇದೇ ವೇಳೆ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯನ್ನೇ ಧ್ವಂಸ ಮಾಡಿರುವ ಘಟನೆ ನಡೆದಿದೆ

    ರಾಜ್ಯದ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ,ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ,ಉಡುಪಿ- ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದ್ದು, ಎಲ್ಲೆಡೆ ಮತದಾನ ಚುರುಕಿನಿಂದ ಸಾಗಿದೆ. ಬಹುತೇಕ ಕಡೆ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

    ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯ ತಲಾ ಒಂದು ಮತಗಟ್ಟೆಗಳಲ್ಲಿ ಮತಯಂತ್ರ ದೋಷ, ವಿವಿ ಪ್ಯಾಡ್ ಸಮಸ್ಯೆ ಕಾಣಿಸಿಕೊಂಡಿದ್ದು, ಮತಯಂತ್ರಗಳನ್ನು ಬದಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಇಲ್ಲಿ ಮತದಾನ ಸ್ವಲ್ಪ ತಡವಾಗಿ ಆರಂಭವಾಯಿತು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಎಲ್ಲ ವ್ಯವಸ್ಥೆ ಮಾಡಿದ್ದು, ಮತದಾರರು ನಿರ್ಭೀತಿಯಿಂದ ಮತಗಟ್ಟೆಗೆ ಬಂದು ಮತ ಹಾಕಿದ್ದು ರಾಜ್ಯದ ಎಲ್ಲೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.ಹಾಸನ ನಗರದ ಸಂತೆಪೇಟೆಯ ಮತಗಟ್ಟೆ ಸಂಖ್ಯೆ 186 ರಲ್ಲಿ ಮತಯಂತ್ರದ ದೋಷದಿಂದ ಮತದಾನ ಒಂದು ಗಂಟೆ ತಡವಾಗಿ ಆರಂಭವಾಯಿತು. ಹಾಗೆಯೇ ಚಿಕ್ಕಮಗಳೂರಿನ ಅರೆನೂರು ಗ್ರಾಮದಲ್ಲೂ ಮತಯಂತ್ರ ತಾಂತ್ರಿಕ ದೋಷದಿಂದ ಮತದಾನ ತಡವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕರೋಪಾಡಿ ಮತಗಟ್ಟೆಯಲ್ಲಿ ಮತಯಂತ್ರ ದೋಷ ಕಂಡು ಬಂದಿದ್ದು ಮತದಾನಕ್ಕೆ ಆರಂಭದ ಅಡ್ಡಿಯಾಯಿತು. ಮತಯಂತ್ರವನ್ನು ಸರಿಪಡಿಸಿದ ನಂತರ ಮತದಾನ ಆರಂಭವಾಯಿತು.

    ರಾಜ್ಯದ ಎಲ್ಲ 14 ಕ್ಷೇತ್ರಗಳಲ್ಲೂ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಹಲವೆಡೆ ಬೆಳಿಗ್ಗೆಯೇ ದೊಡ್ಡ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಬಂದು ಸರದಿ ಸಾಲಿನಲ್ಲಿ ನಿಂತು ಮತ ಹಾಕಿದರು

    ಮಂಗಳೂರು ,ಬೆಂಗಳೂರಿನಲ್ಲೂ ಬೆಳಿಗ್ಗೆಯೇ ಮತ ಹಾಕಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಬಂದಿದ್ದು, ಗಮನ ಸೆಳೆಯಿತು. ಸಂಜೆ 6 ರ ವರೆಗೂ ಮತ ಹಾಕಲು ಅವಕಾಶವಿದೆ. ಹಲವೆಡೆ ಹಿರಿಯ ನಾಗರಿಕರು ಉತ್ಸಾಹದಿಂದ ಮತ ಹಾಕಿದ್ದು, ವಿಶೇಷ ಚೇತನರೂ ಸಹ ಗಾಲಿ ಕುರ್ಚಿಯಲ್ಲಿ ಬಂದು ಮತ ಹಾಕಿದ ದೃಶ್ಯ ಕಂಡು ಬಂತು. ಭವಿಷ್ಯ ನಿರ್ಧಾರ ಇಂದು 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆದಿರುವ ಮೊದಲ ಹಂತದ
    ಚುನಾವಣೆಯಲ್ಲಿ ಒಟ್ಟಾರೆ 247 ಅಭ್ಯರ್ಥಿಗಳು ಕಣದಲ್ಲಿದ್ದು, ಇವರೆಲ್ಲರ ಭವಿಷ್ಯ ವಿದ್ಯುನ್ಮಾನ ಮತಯಂತ್ರದಲ್ಲಿ ಭದ್ರವಾಗಿದೆ.

    ಮೊದಲ ಹಂತದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಮೈಸೂರು ರಾಜವಂಶಸ್ಥ ಯಧುವೀರ ದತ್ತ ಒಡೆಯರ್, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಹೋದರ, ಹಾಲಿ ಸಂಸದ ಡಿ.ಕೆ ಸುರೇಶ್,ಮಾಜಿ ಸಚಿವರಾದ ವಿ. ಸೋಮಣ್ಣ, ಗೋವಿಂದಕಾರಜೋಳ, ಡಾ. ಕೆ. ಸುಧಾಕರ್ ಸೇರಿದಂತೆ ಹಲವು ಘಟಾನುಘಟಿ ನಾಯಕರುಗಳ ರಾಜಕೀಯ ಭವಿಷ್ಯವನ್ನು ಮತದಾರ ವಿದ್ಯುನ್ಮಾನ ಮತಯಂತ್ರದ ಬಟನ್ ಒತ್ತುವ ಮೂಲಕ ನಿರ್ಧರಿಸಿದ್ದು, ಮತದಾರರ ತೀರ್ಮಾನ ಏನು ಎಂಬುದು ಜೂನ್ 4 ರಂದು ನಡೆಯುವ ಮತ ಎಣಿಕೆ ಯವರೆಗೆ ಕಾಯಬೇಕು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss