ಬೆಂಗಳೂರು ನವೆಂಬರ್ 15: ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ ಕಂಬಳಕ್ಕೆ ರಾಜ್ಯ ಸರಕಾರ 1 ಕೋಟಿ ಅನುದಾನ ಘೋಷಿಸಿದೆ ಕಂಬಳ ಸಮಿತಿ ತಿಳಿಸಿದೆ.
ಮೊದಲ ಬಾರಿಗೆ ನಡೆಯುವ ಬೆಂಗಳೂರು ಕಂಬಳ’ಕ್ಕೆ ಕನಿಷ್ಠ 3ರಿಂದ 5 ಲಕ್ಷ ಜನರು ಬರುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ಕಂಬಳ ಸಮಿತಿ (ರಿ.) ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹೇಳಿದರು.
ನವೆಂಬರ್ 25, 26ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ತಯಾರಿ ಸಲುವಾಗಿ ಇಂದು ಬೆಂಗಳೂರಿನ ಬಂಟರ ಸಂಘದಲ್ಲಿ ಕರಾವಳಿಯ ವಿವಿಧ ಜಾತಿ-ಭಾಷಾ ಸಂಘಟನೆಗಳ ಜೊತೆ ನಡೆದ ಬೃಹತ್ ಸಮಾಲೋಚನಾ ಸಭೆ ಬಳಿಕ ಆಯೋಜಿಸಿದ ಬಹಿರಂಗ ಸಮಾವೇಶದಲ್ಲಿ ಅವರು ಈ ವಿಷಯ ತಿಳಿಸಿದರು.
ಬೆಂಗಳೂರು ಕಂಬಳಕ್ಕೆ ಈಗಾಗಲೇ 150ಕ್ಕೂ ಅಧಿಕ ಕೋಣಗಳ ನೋಂದಣಿ ಆಗಿದ್ದು, ಆ ಎಲ್ಲ ಕೋಣಗಳನ್ನು ನವೆಂಬರ್ 23ರಂದು ಉಪ್ಪಿನಂಗಡಿಯಲ್ಲಿ ಬೀಳ್ಕೊಡುಗೆ ಮಾಡಿ ಕಳಿಸಿಕೊಡಲಾಗುವುದು ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ತಿಳಿಸಿದರು. ಅಷ್ಟೂ ಕೋಣಗಳನ್ನು ಹಾಸನ ಹಾಗೂ ನೆಲಮಂಗಲದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಗುವುದು. ಅಲ್ಲದೆ ಪ್ರತಿ ತಾಲೂಕಲ್ಲೂ ಸ್ವಾಗತ-ಬೀಳ್ಕೊಡುಗೆ ಇರಲಿದೆ ಎಂದರು. ಬೆಂಗಳೂರು ಕಂಬಳಕ್ಕೆ ಬಾಲಿವುಡ್ ನಟಿ ಐಶ್ವರ್ಯಾ ರೈ, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಇರುವ ಕರಾವಳಿ ಮೂಲದ ಸಿನಿಮಾತಾರೆಯರು ಆಗಮಿಸಲಿದ್ದಾರೆ ಎಂದು ಸಮಿತಿ ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ತಿಳಿಸಿದ್ದಾರೆ.