ವಿಶಾಲ ವ್ಯಾಪ್ತಿಯ ಸರಹದ್ದನ್ನು ಪಡೆದಿರುವ ತುಳುನಾಡು, ಸಂಯಮಶೀಲತೆಯ ಜೊತೆ ಜೊತೆಗೇನೇ ಹುಟ್ಟು ಹೋರಾಟದ ಗುಣವನ್ನು ಹೊಂದಿದ್ದ ನಾಡು. ಅಂತೆಯೇ ಒಂದು ಕಾಲಘಟ್ಟದ ಉಪಯೋಗದ ಸಲಕರಣೆಗಳು ಜಾನಪದ ಬದುಕಿನಿಂದ ದೂರವಾದಾಗ, ಇನ್ನೊಂದು ಕಾಲಘಟ್ಟದಲ್ಲಿ ಜಾನಪದದ ಸಂಗ್ರಹಯೋಗ್ಯ ವಸ್ತುಗಳಾಗಿ, ಮುಂದೆ ವರ್ತಮಾನದ ಬಳಕೆಯ ವಸ್ತುಗಳು ಜಾನಪದ ಲೋಕವನ್ನು ಸೇರಲೂಬಹುದು. ಇವೆಲ್ಲವುಗಳ ಧಾತುರೂಪವಾಗಿ ನಮಗೆ, ಅಂದರೆ ಪ್ರಕೃತಿ ಆರಾಧಕರಾದ ನಮಗೆ ಕಾಣಸಿಗುವವನು ಸೂರ್ಯ ತೇಜಸ್ಸಿನ, ವರ್ಚಸ್ಸಿನ ತನ್ಮೂಲಕ ಬದುಕಿನ ಪ್ರತಿಯೊಂದು ಹಂತದ ಬೆಳವಣಿಗೆಗೆ ಸಂದಾಯವಾಗಿ ನಿಲುವಾತ ಸೂರ್ಯ. ಇಲ್ಲಿ ಸೂರ್ಯನ ಉರಿಗಿಂತ ಜ್ಞಾನದ ಬೆಳಕಿನ ಚಕ್ಷು ನಮಗೆ ಪ್ರಧಾನವಾಗಿ ಕಾಣಸಿಗುತ್ತದೆ.
ವ್ಯಕ್ತಿ ಸಮಷ್ಟಿಯ ಶಕ್ತಿಯಾಗಿ ಎದ್ದು ನಿಲ್ಲಬೇಕಾದರೆ ಸೂರ್ಯನ ಸಾರಥ್ಯ ಅತೀ ಅಗತ್ಯ. ಆ ದೃಷ್ಟಿಯನ್ನಿಟ್ಟುಕೊಂಡು ತುಳುನಾಡಿನ ಧ್ವಜದ ಕಲ್ಪನೆಯಲ್ಲೂ, ದೈವ ದೇವರ ಆರಾಧನೆಯಲ್ಲೂ ಸೂರ್ಯನಿಗೆ ನಾವು ತೋರಿಸುವ ಗೌರವವನ್ನು ಮುಂದಿಟ್ಟುಕೊಂಡು ಸರ್ವ ತುಳುವರ, ಆ ಮೂಲಕ ಕನ್ನಡಿಗರನ್ನು ಮುಂದಿಟ್ಟುಕೊಂಡು ತುಳುನಾಡ ಸೂರ್ಯ ಎಂಬ ಮಾಸಿಕ ಪತ್ರಿಕೆ ಹಾಗೂ www.tulunadasurya.com ಕನ್ನಡ ತುಳು ಸುದ್ದಿಯ ಅಂತರ್ಜಾಲ ತಾಣ ತಮ್ಮ ಮಡಿಲಿಗೆ ಅರ್ಪಿಸುತ್ತಿದ್ದೇನೆ.
ಬಹಳಷ್ಟು ವರ್ಷಗಳಿಂದ ಸಾಮಾಜಿಕ ಕಳಕಳಿಯಿಂದ ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ನನ್ನದೇ ಆದ ದೃಷ್ಟಿಕೋನವನ್ನು ಇಟ್ಟುಕೊಂಡು ಕಾರ್ಯ ಪ್ರವೃರ್ತ ನಾದವನು ನಾನು. ಜನರಿಗೆ ಆಗುವ ಬೇರೆ ಬೇರೆ ರೀತಿಯ ಅನಾನುಕೂಲತೆಗಳಿಗೆ, ಅಡಚಣೆಗಳಿಗೆ, ತೊಂದರೆಗಳಿಗೆ, ಹೋರಾಟದ ಮಾರ್ಗದಿಂದ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ. ನನ್ನೊಬ್ಬನ ಏಳಿಗೆಗಿಂತ ಸರ್ವರ ಏಳಿಗೆಯಲ್ಲಿ ನನ್ನ ಏಳಿಗೆಯನ್ನು ಕಂಡವನು ನಾನು. ತುಳುನಾಡ ಸಂಸ್ಕೃತಿ, ಭಾಷೆ, ಆಚಾರ ವಿಚಾರಗಳ ಪ್ರಶ್ನೆ ಬಂದಾಗ ಹೆಗಲಿಗೆ ಹೆಗಲು ಕೊಟ್ಟು ಪ್ರಾಮಾಣಿಕವಾಗಿ ನನ್ನನ್ನು ತೊಡಗಿಸಿಕೊಳ್ಳುವುದರ ಮೂಲಕ ನನ್ನದೇ ಆದ ಛಾಪನ್ನು ಒತ್ತಿದ್ದೇನೆ. ಒಂದು ಒಳ್ಳೆಯ ಧ್ಯೇಯೋದ್ದೇಶಗಳನ್ನಿರಿಸಿ ತುಳುನಾಡ ರಕ್ಷಣೆಯನ್ನು ಮನದಲ್ಲಿರಿಸಿಕೊಂಡು ತುಳುನಾಡ ರಕ್ಷಣಾ ವೇದಿಕೆ ಎಂಬ ಸಂಘಟನೆಯನ್ನು ಕಟ್ಟಿ ಬಹಳಷ್ಟು ಹೋರಾಟಗಳ ಮೂಲಕ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವಲ್ಲಿ ಸಫಲವಾಗಿದ್ದೇನೆ. ನಿಮ್ಮೆಲ್ಲರ ಸಹಕಾರ ದಿಂದ ಯಶಸ್ಸನ್ನೂ ಪಡೆದಿದ್ದೇನೆ. ನಮ್ಮ ಚಿಂತನೆಗಳನ್ನು ಕೇವಲ ವೇದಿಕೆಗಳಲ್ಲಿ ಹಂಚಿಕೊಂಡವರೇ ಹೆಚ್ಚು. ಜನರನ್ನು ಅದು ಮುಟ್ಟಲಾರದು. ಆದ ಕಾರಣ ನನ್ನ ಒಲವು ಮಾದ್ಯಮರಂಗದತ್ತ ಹೊರಳಿತು. ನಾನು ಮಾಡುವ ಹೋರಾಟ ಆಗಿರಬಹುದು. ಸಾಮಾಜಿಕ ನ್ಯಾಯದ ಪರವಾದ ಹೋರಾಟವಾಗಿರಬಹುದು ಸಾಮಾಜಿಕ ಕಳಕಳಿ ಇರಬಹುದು, ಅದನ್ನು ಮಾಧ್ಯಮದ ಮೂಲಕ ಜನರಿಗೆ ತಲುಪಿಸುವ ಜವಾಬ್ದಾರಿಯನ್ನರಿತು ಮಾದ್ಯಮರಂಗದತ್ತ ಮನಸ್ಸನ್ನು ಹೊರಳಿಸಿದ್ದೇನೆ. ಸಂಘಟನೆಯ ವಿಚಾರಧಾರೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಬೇಕೆಂಬುದು ನಮ್ಮ ಮನದಾಸೆ.
ಇನ್ನೊಂದು ನಮ್ಮ ಮಹತ್ತರ ಉದ್ದೇಶವೇನೆಂದರೆ, ದೊಡ್ಡ ದೊಡ್ಡ ಮಾದ್ಯಮಗಳು ದೊಡ್ಡ ದೊಡ್ಡ ಸಾಹಿತಿಗಳ ಬರವಣಿಗೆಗಳಿಗೆ ಮಾತ್ರ ವೇದಿಕೆಯನ್ನೊದಗಿಸಲು ಸಾಧ್ಯವಾಗುತ್ತದೆ. ಆದರೆ ಬರೆಯಬೇಕೆಂದು ಹೊಸದಾಗಿ ಹೊರಟವರಿಗೆ ಅಲ್ಲಿ ಅವಕಾಶಗಳು ಸಿಗುವುದು ತೀರಾ ಕಡಿಮೆ. ಇಂತಹ ಎಲೆಮರೆಯ ಕಾಯಂತಿರುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಬರವಣಿಗೆಯ ಅಕ್ಷರ ವೇದಿಕೆಯನ್ನು ಕಲ್ಪಿಸುವತ್ತ ನಾವು ಮುಂದಿನ ದಿನ ಹೆಜ್ಜೆಯನ್ನಿಡುತ್ತಿದ್ದೇವೆ. ತುಳುನಾಡಿನ ಅದೆಷ್ಟೋ ಯುವ ಪ್ರತಿಭೆಗಳಿಗೆ, ಸಾಹಿತ್ಯಿಕವಾದ, ಸಾಮಾಜಿಕ ಕಳಕಳಿಯ, ಚಿತ್ರರಂಗ, ಕಲಾರಾಧಕರು, ಆರಾಧಕರು, ಆಚರಣೆಗಳು, ವ್ಯತ್ತಿಪರ, ವ್ಯತ್ತಿನಿರತ, ಆರ್ಥಿಕ, ಸಾಮಾಜಿಕ, ನ್ಯಾಯಾಂಗ ವ್ಯವಸ್ಥೆಯ ಒಟ್ಟು ಎಲ್ಲಾ ರಂಗದ ಯುವ ಪ್ರತಿಭೆಗಳನ್ನು ಸಮಾಜಕ್ಕೆ ಗುರುತಿಸಿ ತೋರಿಸುವುದು ನಮ್ಮ ಆದ ಕರ್ತವ್ಯವಾಗಿದೆ. ಇವರೆಲ್ಲರನ್ನು ಸಮಾಜಮುಖಿ ಚಿಂತನೆಗಳಿಗೆ ಒರೆಹಚ್ಚಲು ಉದಯಿಸಿ ಬರುತ್ತಿದೆ `ತುಳುನಾಡ ಸೂರ್ಯ
ನಾನೆಂದೂ ನಿಮ್ಮವನು, ನಿಮ್ಮೆಲ್ಲರ ಸೇವಕನೆಂದು ತಿಳಿದು ನಾನಿಟ್ಟ ಹೆಜ್ಜೆಗೆ ತಮ್ಮೆಲ್ಲರ ಹಾರೈಕೆಯನ್ನು ಬಯಸುತ್ತಿದ್ದೇನೆ. ಪತ್ರಿಕಾರಂಗಕ್ಕೆ ಅಂಬೆಗಾಲಿಟ್ಟು ಬರುತ್ತಿರುವ ನನಗೆ ತಮ್ಮೆಲ್ಲರ ಯೋಗ್ಯ ಮಾರ್ಗದರ್ಶನದ ಅಗತ್ಯವಿದೆ. ನಾವೆಲ್ಲರೂ ಸೇರಿ ಸಾಮಾಜಿಕ ಶಾಂತಿಯನ್ನು ಉಳಿಸುವಲ್ಲಿ ಕಂಕಣಬದ್ಧರಾಗೋಣ.
ಯೋಗೀಶ್ ಶೆಟ್ಟಿ ಜಪ್ಪು
ಸಂಪಾದಕರು
ತುಳುನಾಡ ಸೂರ್ಯ