Friday, April 26, 2024
spot_img
More

    Latest Posts

    ಉಡುಪಿ: ಅಕ್ಷಿತಾ ಹೆಗ್ಡೆ ಕನ್ನಡಿ ಕೈ ಬರಹ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆ

    ಉಡುಪಿ : ಉಡುಪಿಯ ಅಕ್ಷಿತಾ ಹೆಗ್ಡೆ ಅಪರೂಪದ ಸಾಧನೆ ಮಾಡಿದ್ದಾರೆ. ತನ್ನ ಅಪೂರ್ವ ಶೈಲಿಯ ಬರಹದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆಯಾಗಿದ್ದಾರೆ.

    ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವದವರಾದ ಅಕ್ಷಿತಾ, ಕಡುಬಡತನದಲ್ಲಿ ಬೆಳೆದವರು. ಬಡತನವನ್ನು ಅಡ್ಡಿ ಎಂದು ಭಾವಿಸದೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದವರು. ಮಂಗಳೂರು ವಿ.ವಿ.ಯ ಮೂಲಕ ಪದವಿ ವೇಳೆ ಬಂಗಾರದ ಪದಕ ಪಡೆದ ಸಾಧಕಿ ಅಕ್ಷಿತಾ ಇದೀಗ ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಕನ್ನಡಿ ಕೈ ಬರಹದ ಮೂಲಕ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ಮುದ್ರಿಸಿದ್ದಾರೆ. ಮಂಕುತಿಮ್ಮನ ಕಗ್ಗದಲ್ಲಿ 900 ಕ್ಕೂ ಅಧಿಕ ಪದ್ಯಗಳಿದ್ದು, ಈ ಪೈಕಿ 13 ಆಯ್ಕೆಮಾಡಿಕೊಂಡಿರುವ ಅಕ್ಷಿತಾ ಹೆಗ್ಡೆ 52 ಲೈನ್‌ಗಳನ್ನು 45.11 ನಿಮಿಷದಲ್ಲಿ ಬರೆದು ಈ ಸಾಧನೆ ಮರೆದಿದ್ದಾರೆ. ಅಕ್ಷಿತಾ ಹೆಗ್ಡೆ ಕಲ್ಯ ಸರಕಾರಿ ಪ್ರೌಢಶಾಲೆಯಲ್ಲಿ 1-10 ನೇ ತರಗತಿ, ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಶಿರ್ವ ಮೂಲ್ಕಿ ಸುಂದರರಾಮ್ ಶೆಟ್ಟಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಹಾಗೂ ನಿಟ್ಟೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಕಾಲೇಜಿನಲ್ಲಿ ಎಂಬಿಎ ಶಿಕ್ಷಣವನ್ನು ವ್ಯಾಸಂಗ ಮಾಡಿದ್ದರು.

    ಅಕ್ಷಿತಾ ಹೆಗ್ಡೆ ತನ್ನ ಉತ್ತಮ ಕನ್ನಡ ಕೈ ಬರಹವನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಮಾರ್ಚ್ ನಲ್ಲಿ ಕಳುಹಿಸಿದ್ದು, ಕನ್ನಡಿ ಬರಹವನ್ನು ಕಳುಹಿಸುವಂತೆ ಸಲಹೆ ಬಂದಿತ್ತು. ಹೀಗಾಗಿ ಇದನ್ನು ಸವಾಲಾಗಿ ಸ್ವೀಕರಿಸಿದ ಇವರು 3-4 ದಿನಗಳಲ್ಲೇ ಕನ್ನಡಿ ಬರಹವನ್ನು ಕಲಿತು ಅದರ ವೀಡಿಯೋ ತುಣುಕುವನ್ನು ಏಪ್ರಿಲ್ ಮೊದಲ ವಾರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಕಳುಹಿಸಿದ್ದರು. ಸದ್ಯ ಈ ಬರಹ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.

    ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಏ. 10 ರಂದು ವೀಡಿಯೋ ದಾಖಲಿಸಿ ಅಕ್ಷಿತಾ ಹೆಗ್ಡೆ ಅವರ ಕನ್ನಡಿ ಬರಹವನ್ನು ದಾಖಲಿಸಿ ತನ್ನ ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಳಿಸಿದೆ. ಕುಕ್ಕೆಹಳ್ಳಿ ದೊಡ್ಡಬೀಡು ದಿ. ಸುಭಾಸ್‌ಚಂದ್ರ ಹೆಗ್ಡೆ, ಶಿರ್ವದ ಜಯಲಕ್ಷ್ಮಿ ದಂಪತಿ ಪುತ್ರಿಯಾಗಿರುವ ಅಕ್ಷಿತಾ ಹೆಗ್ಡೆ ನಿಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಇಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಸದ್ಯ ಇವರು ಅದೇ ಸಂಸ್ಥೆಯಲ್ಲಿ ರಿಸರ್ಚ್ ವಿಭಾಗದಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ನನ್ನ ಕನ್ನಡಿ ಕೈ ಬರಹಕ್ಕೆ ಬಹಳ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ವೀಡಿಯೋ ನೋಡಿ ಅನೇಕರು ತುಳು ಭಾಷೆಯಲ್ಲಿ ಬರೆಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ನನಗೆ ಈ ಸಾಧನೆ ಖುಷಿ ಕೊಟ್ಟಿದೆ. ಗುರುತಿಸಿರುವುದಕ್ಕೆ ಸಂಸ್ಥೆಗೆ ವಂದನೆಗಳು. ತಾಯಿ, ಊರಿನವರು, ಶಿಕ್ಷಕ ವೃಂದ, ಸ್ನೇಹಿತರು, ಸಹೊದ್ಯೋಗಿಗಳು ಸಹಕಾರ ಕೊಟ್ಟಿದ್ದಾರೆ ಎಂದು ಅಕ್ಷತಾ ಹೆಗ್ಡೆ ಹೇಳಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss