Monday, April 15, 2024
spot_img
More

  Latest Posts

  ಕಾಶ್ಮೀರದಲ್ಲಿ ಐತಿಹಾಸಿಕ ಯಕ್ಷಗಾನ ಪ್ರದರ್ಶನ

  ‘ಕರ್ನಾಟಕದಿಂದ ಜಮ್ಮು-ಕಾಶ್ಮೀರಕ್ಕೆ ಬಂದು ಶ್ರೀನಗರದಲ್ಲಿ ಮೊದಲ ಬಾರಿಗೆ ಯಕ್ಷಗಾನ ಪ್ರದರ್ಶನ ಮಾಡಿರುವುದು ಒಂದು ಐತಿಹಾಸಿಕ ದಾಖಲೆ. ಇದಕ್ಕೆ ಕಾರಣರಾದ ಎಲ್ಲರೂ ಅಭಿನಂದನಾರ್ಹರು’ ಎಂದು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಶ್ಲಾಘಿಸಿದ್ದಾರೆ.ಅವರು ಅ.೨ ಗಾಂಧಿ ಜಯಂತಿ ಪ್ರಯುಕ್ತ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಶೇರ್-ಇ-ಕಾಶ್ಮೀರ್‌ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ದೆಹಲಿ ಘಟಕ, ಸುಳ್ಯದ ಬೆಳ್ಳಾರೆಯ ನಿನಾದ ಸಾಂಸ್ಕೃತಿಕ ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಸರ್ಕಾರದ ಕಲೆ, ಸಂಸ್ಕೃತಿ ಮತ್ತು ಭಾಷಾ ಇಲಾಖೆ ಆಯೋಜಿಸಿದ್ದ ಹಿಂದಿ ಯಕ್ಷಗಾನ ಮತ್ತು ಪಜ್ಜೆ-ಗೆಜ್ಜೆ ತುಳು-ಕನ್ನಡ ಶಾಸ್ತ್ರೀಯ, ಜಾನಪದ ನೃತ್ಯ ಪ್ರಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

  ವೈಷ್ಣೋದೇವಿ ಗೆ ಆಹ್ವಾನ:
  ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತ ಪಟ್ಲ ಸತೀಶ್‌ ಶೆಟ್ಟಿ ನೇತೃತ್ವದಲ್ಲಿ ಪಾವಂಜೆ ಮೇಳದ ಕಲಾವಿದರು ಪ್ರಥಮ ಬಾರಿಗೆ ಹಿಂದಿ ಭಾಷೆಯಲ್ಲಿ ಪ್ರದರ್ಶಿಸಿದ ‘ ಶ್ರೀದೇವಿ ಮಹಾತ್ಮೆ’ ಯಕ್ಷಗಾನ ವೀಕ್ಷಿಸಿದ ಲೆ.ಗವರ್ನರ್‌ ಸಿನ್ಹಾ ‘ಕಲೆ ಸಮಾಜವನ್ನು ಒಗ್ಗೂಡಿಸುತ್ತದೆ. ಸಮಾಜ ಜಾಗೃತಗೊಂಡಾಗ ರಾಷ್ಟ್ರ ನಿರ್ಮಾಣ ಸಾಧ್ಯ. ದೇಶದ ವೈವಿಧ್ಯಮಯ ಕಲೆಗಳು ಈ ಕೆಲಸ ಮಾಡುತ್ತಿವೆ. ನಮ್ಮ ವಿದ್ಯುತ್‌ ಇಲಾಖೆ ಪ್ರಿನ್ಸಿಪಲ್‌ ಸೆಕ್ರೆಟರಿ ರಾಜೇಶ್‌ ಪ್ರಸಾದ್‌ ಅವರು ಗಾಂಧಿ ಜಯಂತಿಗೆ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ ಕೇಳಿಕೊಂಡಾಗ ಖುಷಿಯಿಂದ ಒಪ್ಪಿಗೆ ನೀಡಿದೆ. ಈ ಯಕ್ಷಗಾನ ಕಾರ್ಯಕ್ರಮ ಜಮ್ಮು-ಕಾಶ್ಮೀರದ ಸಭಿಕರನ್ನು ಮಂತ್ರಮುಗ್ಧಗೊಳಿಸಿದೆ. ಹೀಗಾಗಿ ನವರಾತ್ರಿ ವೇಳೆ ನಿಮ್ಮ ತಂಡ ಜಮ್ಮುವಿನ ವೈಷ್ಣೋದೇವಿ ಮಂದಿರದಲ್ಲಿ ಮತ್ತೊಮ್ಮೆ ಇದೇ ಪ್ರದರ್ಶನ ನೀಡಬೇಕು ಎಂದು ಆಹ್ವಾನ ನೀಡಿದರು.

  ಮಹಾತ್ಮ ಗಾಂಧಿಯವರಿಗೆ ಕರ್ನಾಟಕದೊಂದಿಗೆ ಆತ್ಮೀಯ ಒಡನಾಟವಿದ್ದುದನ್ನು ಉಲ್ಲೇಖಿಸಿದ ಅವರು, ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತ ಕರ್ನಾಟಕದಲ್ಲಿ ಮೇಳೈಸಿದೆ. ಗಂಗೂಬಾಯಿ ಹಾನಗಲ್ಲ, ಪಂಡಿತ್ ಭೀಮಸೇನ ಜೋಶಿ, ಪಾಟೀಲ ಪುಟ್ಟಪ್ಪ ಹಾಗೂ ಹಲವರು ಸಾಂಸ್ಕೃತಿಕ, ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಈಗಲೂ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಬಸವಣ್ಣನವರ ವಚನಗಳು ಅನುರಣಿಸುತ್ತಿರುತ್ತವೆ. ಕಲೆ, ಸಂಸ್ಕೃತಿ, ಪರಂಪರೆಯ ನೆಲೆಬೀಡು ಕರ್ನಾಟಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಅರುಣ್‌ ಕುಮಾರ್‌ ಮೆಹ್ತಾ ಮಾತನಾಡಿ, ನನ್ನ 35 ವರ್ಷಗಳ ವೃತ್ತಿ ಜೀವನದಲ್ಲಿ ಇಂಥದ್ದೊಂದು ಜಾನಪದ ಕಲಾ ಪ್ರದರ್ಶನವನ್ನು ನೋಡಿರಲಿಲ್ಲ. ಬಹಳ ಸೊಗಸಾಗಿ ಮನಸ್ಸು ಮುಟ್ಟುವಂತೆ ಯಕ್ಷಗಾನ ಪ್ರದರ್ಶನ ನೀಡಿದ್ದೀರಿ. ಕಥಾನಕವೊಂದನ್ನು ವಿವರಿಸುವ ರೀತಿ ಅನೂಹ್ಯವಾದುದು ಎಂದು ಶ್ಲಾಘಿಸಿದರು.

  ಲೆ.ಗವರ್ನಲ್‌ ಕಚೇರಿ ಸಲಹೆಗಾರ ರಾಜೀವ್‌ ರೈ ಭಟ್ನಾಗರ್‌ ಮಾತನಾಡಿ, ಯಕ್ಷಗಾನ ವೀಕ್ಷಣೆ ನಮಗೊಂದು ವಿನೂತನ ಅನುಭವ. ಅದನ್ನು ಪ್ರಸ್ತುತಪಡಿಸಿದ ರೀತಿಯಂತೂ ಅದ್ಭುತ. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದ ಎಂದರು.  

  ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮುಖ್ಯಸ್ಥ ಪಟ್ಲ ಸತೀಶ್‌ ಶೆಟ್ಟಿ ಮತ್ತು ಫೌಂಡೇಷನ್‌ನ ದೆಹಲಿ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರನ್ನು ಲೆ.ಗವರ್ನರ್‌‌ ಮನೋಜ್‌ ಸಿನ್ಹಾ ಸನ್ಮಾನಿಸಿದರು. ಆರಂಭದಲ್ಲಿ ಸುಳ್ಯದ ಬೆಳ್ಳಾರೆಯ ನಿನಾದ ಸಾಂಸ್ಕೃತಿಕ ಕೇಂದ್ರದ ಕಲಾವಿದರು ಶಾಸ್ತ್ರೀಯ, ಜನಪದ ನೃತ್ಯ ಪ್ರದರ್ಶನ ನೀಡಿದರು.

  ಕರಾವಳಿಯ ಪ್ರೇಕ್ಷಕರು:
  ಯಕ್ಷಗಾನ ವೀಕ್ಷಿಸಲು ಕರಾವಳಿ ಭಾಗದಿಂದ ದಕ್ಷಿಣ ಕನ್ನಡದ ೧೩೦ಕ್ಕಿಂತ ಹೆಚ್ಚು ಪ್ರವಾಸಿಗಳು ಶ್ರೀನಗರಕ್ಕೆ ಬಂದಿದ್ದರು.

  ಕಲೆಯ ವಿನಿಮಯ:
  ‘ಏಕ್‌ ಭಾರತ್‌ ಶ್ರೇಷ್ಠ ಭಾರತ್‌ ಎಂಬ ಘೋಷವಾಕ್ಯದಂತೆ ಕಲೆ, ಸಂಸ್ಕೃತಿಗಳ ಆದಾನ-ಪ್ರದಾನ ಮಾಡುವುದು ನಮ್ಮ ಉದ್ದೇಶ. ನಮ್ಮ ಪರಂಪರೆ ದೇಶದ ಮೂಲೆ ಮೂಲೆಗೆ ತಲುಪಬೇಕು. ಅಂತೆಯೇ ಕರಾವಳಿಯ ಕಲೆ ಜಮ್ಮು-ಕಾಶ್ಮೀರಕ್ಕೆ ಬರುವಂತೆ ಮಾಡಿದ್ದೇವೆ’ ಎಂದು
  ರಾಜೇಶ್‌ ಪ್ರಸಾದ್‌ ಹಿರಿಯಡ್ಕ,ಜಮ್ಮು ಕಾಶ್ಮೀರ ವಿದ್ಯುತ್‌ ಇಲಾಖೆ ಪ್ರಿನ್ಸಿಪಲ್‌ ಸೆಕ್ರೆಟರಿ ರಾಜೇಶ್ ಪ್ರಸಾದ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು.
  ಯಕ್ಷ ಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ದಿಲ್ಲಿ ಕನ್ನಡ ಶಾಲೆ ಮತ್ತು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಬರೋಡಾದ ಉದ್ಯಮಿ ಶಶಿಧರ ಶೆಟ್ಟಿ, ಹಿರಿಯ ಕಲಾವಿದ ಪ್ರೊ. ಎಂ.ಎಲ್.ಸಾಮಗ, ಪಟ್ಲ ಫೌಂಡೇಶನ್ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ರೈ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಲ್ಪಟ್ಟಿತು.
  ವಿವಿಧ ಘಟಕಗಳ ಪದಾಧಿಕಾರಿಗಳಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಬಿ.ಭುಜಬಲಿ ಧರ್ಮಸ್ಥಳ, ಪ್ರದೀಪ್ ಆಳ್ವ ಕದ್ರಿ, ಜಗನ್ನಾಥ ಶೆಟ್ಟಿ ಬಾಳ, ತಾರಾನಾಥ ಶೆಟ್ಟಿ ಬೋಳಾರ, ರವಿ ಶೆಟ್ಟಿ ಅಶೋಕ ನಗರ, ಸುಧಾಕರ ಪೂಂಜಾ, ರವಿ ರೈ ಕಳಸ, ವಿಜಯ ಶೆಟ್ಟಿ ಅಜೆಕಾರು, ಸತೀಶ್ ಶೆಟ್ಟಿ ತೀರ್ಥಹಳ್ಳಿ, ಪ್ರತಿಭಾ ಎಲ್.ಸಾಮಗ, ಗೀತಾ ಸರಳಾಯ, ಅನಿತಾ ಪಿಂಟೋ,ಪೂರ್ಣಿಮಾ ಶಾಸ್ತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss