ಉಡುಪಿ: ಆಸ್ತಿಗಾಗಿ ಮಹಿಳೆಯೊಬ್ಬಳು ಮಗ ಹಾಗೂ ಗೆಳೆಯನೊಂದಿಗೆ ಸೇರಿಕೊಂಡು ಪತಿಯ ಹತ್ಯೆ ನಡೆಸಲು ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆ ಹೆಬ್ರಿಯ ಮುದ್ರಾಡಿ ಗ್ರಾಮದ ಸುಬ್ಬಣ್ಣ ಕಟ್ಟೆ ಎಂಬಲ್ಲಿ ನಡೆದಿದೆ. ಜಯಾನಂದ ಕಾಮತ್ ಎಂಬವರ ಪತ್ನಿ ಅಮಿತಾ ಕಾಮತ್, ಮಗ ದೀಕ್ಷಿತ್ ಹಾಗೂ ಅಮಿತಾ ಅವರ ಸ್ನೇಹಿತ ಮಂಜುನಾಥ ಕೃತ್ಯ ಎಸಗಿದವರು ಎನ್ನಲಾಗಿದೆ. ಜಯಾನಂದ ಕಾಮತ್ ಹೆಸರಿನಲ್ಲಿ ಪೆರ್ಡೂರಿನಲ್ಲಿ ಜಾಗವಿದ್ದು, ಆ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಡಬೇಕೆಂದು ಪತ್ನಿ ಅಮಿತಾ ಕಾಮತ್ ತಕರಾರು ಮಾಡುತ್ತಿದ್ದರು. ಈ ವಿಚಾರದಲ್ಲಿ ಗಂಡನ ಮೇಲೆ ಅಮಿತಾ ಅವರಿಗೆ ವೈಷಮ್ಯ ಇತ್ತು ಎನ್ನಲಾಗಿದೆ.
ಸುಮಾರು 3 ದಿನದಿಂದ ಅಮಿತಾ ಕಾಮತ್ ಇವರ ಸ್ನೇಹಿತ ಮಂಜುನಾಥ ಇವರ ಮನೆಯಲ್ಲಿಯೇ ಉಳಿದುಕೊಂಡಿದ್ದ ಎನ್ನಲಾಗಿದೆ. ಶನಿವಾರ ರಾತ್ರಿ 2-00 ಗಂಟೆಗೆ ಜಯಾನಂದ ಅವರು ರೂಮ್ ನಲ್ಲಿ ಮಲಗಿಕೊಂಡಿರುವಾಗ ಅಲ್ಲಿಗೆ ಅವರ ಪತ್ನಿ, ಮಗ ದೀಕ್ಷಿತ್ ಮತ್ತು ಮಂಜುನಾಥ ಬಂದು ಪೆರ್ಡೂರಿನ ಜಾಗವನ್ನು ತನ್ನ ಹೆಸರಿಗೆ ಬರೆದು ಕೊಡುವುದಿಲ್ಲವಾ ಎಂದು ಅವಾಚ್ಯ ಶಬ್ದದಿಂದ ಬೈದು, ಬೈರಾಸಿನಿಂದ ಜಯಾನಂದ ಅವರ ಕಾಲು ಮತ್ತು ಕೈಗಳನ್ನು ಕಟ್ಟಿ ಅವರು ಅಲುಗಾಡದಂತೆ ಬಿಗಿಯಾಗಿ ಹಿಡಿದು ಕೊಂಡಿದ್ದು, ಅವರು ಬೊಬ್ಬೆ ಹಾಕಲು ಪ್ರಯತ್ನಿಸಿದಾಗ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಕುತ್ತಿಗೆಯನ್ನು ಕೈಯಿಂದ ಉಸಿರಾಡಲು ಆಗದ ರೀತಿಯಲ್ಲಿ ಬಿಗಿಯಾಗಿ ಹಿಡಿದುಕೊಂಡು ಅಲ್ಲಿಯೇ ಇದ್ದ ದಿಂಬಿನಿಂದ ಉಸಿರಾಡಲು ಆಗದ ರೀತಿಯಲ್ಲಿ ಮುಖಕ್ಕೆ ಒತ್ತಿ ಹಿಡಿದು ಸಾಯಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಮಂಜುನಾಥ ಮತ್ತು ದೀಕ್ಷಿತ್ ಎದೆಯ ಮೇಲೆ ಕುಳಿತು ಕೊಂಡಿದ್ದಾರೆ. ಈ ವೇಳೆ ಜಯಾನಂದ ಅವರು ಅಮಿತಾರಲ್ಲಿ ಜಾಗವನ್ನು ನಿನ್ನ ಹೆಸರಿಗೆ ಬರೆದು ಕೊಡುತ್ತೇನೆಂದು ಹೇಳಿದಾಗ ಆಕೆ ಸಹಿಯನ್ನು ಒಂದು ಖಾಲಿ ಪೇಪರ್‌ನಲ್ಲಿ ಪಡಕೊಂಡಿದ್ದಾರೆ. ಅಲ್ಲದೇ, ಇನ್ನೇನಾದರೂ ಆಟವಾಡಿದರೆ ಇಲ್ಲಿಯೇ ಕೊಂದು ಬಿಡುತ್ತೇನೆಂದು ಜೀವ ಬೆದರಿಕೆ ಹಾಕಿ ಹೋಗಿದ್ದಾರೆ. ಈ ವೇಳೆ ತುಟಿಯ ಬಳಿ ಮತ್ತು ಎದೆಯ ಬಳಿ ನೋವಾಗಿರುತ್ತದೆ ಎಂದು ಜಯಾನಂದ ಕಾಮತ್ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

