ಮಂಗಳೂರು: ತುಳುನಾಡ ರಕ್ಷಣಾ ವೇದಿಕೆಯ 15ನೇ ವಾರ್ಷಿಕೋತ್ಸವದ ಅಂಗವಾಗಿ ಮೂರು ದಿನಗಳ ವಿಶ್ವ ತುಳುವರ ಸಮ್ಮೇಳನ-2023 ಅನ್ನು ನವೆಂಬರ್‌ನಲ್ಲಿ ನಡೆಸಲು ಸಂಸ್ಥೆಯು ಯೋಜಿಸಿದೆ.

ವಿಶ್ವ ತುಳುವರ ಸಮ್ಮೇಳನ- 2023 ರ ಅಂಗವಾಗಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಇತರ ಗಣ್ಯರೊಂದಿಗೆ ಫೆಬ್ರುವರಿ 10ರಂದು ತುಳುಭವನದ ಸಿರಿ ಚಾವಡಿಯಲ್ಲಿ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಿದರು.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಕೆ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ, ತುಳುನಾಡು ಭಾರತದ ಕಿರೀಟ, ತುಳುನಾಡಿನ ಜನರು ದೈವಗಳಲ್ಲಿ ನಂಬಿಕೆ ಇಟ್ಟು ಜೀವನ ಸಾಗಿಸುತ್ತಿದ್ದಾರೆ, ಈ ನಂಬಿಕೆಯಿಂದ ಸರ್ವೇಶ್ವರನ ಆಶೀರ್ವಾದ ಪಡೆದು ಸಮೃದ್ಧ ಜೀವನ ನಡೆಸುತ್ತಿದ್ದಾರೆ. ನಾವು ಬೆಳೆಯುವಾಗ ಇತರರೂ ಬೆಳೆಯಲಿ ಎಂಬ ವಿಶಾಲ ಮನೋಭಾವವನ್ನು ಹೊಂದಬೇಕು.ತುಳು ಭಾಷೆ, ಸಂಸ್ಕೃತಿ ನಾನಾ ಸವಾಲುಗಳನ್ನು ಎದುರಿಸಿ ಬೆಳೆಯುತ್ತಿದೆ.ಹಾಗಾಗಿ ಇಂತಹ ಸಮಾವೇಶಗಳು ತುಳುನಾಡಿನ ಮಾತೆಯ ಸೇವೆಯಾಗಲಿದೆ ಎಂದರು.

ಮಾಡೂರು ಶಿವಗಿರಿ ಮಠದ ಶ್ರೀ ದುರ್ಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಶ್ವ ತುಳುವರ ಸಮ್ಮೇಳನ-2023 ರ ಸರ್ವಾಧ್ಯಕ್ಷ ಖ್ಯಾತ ಉದ್ಯಮಿ ಆನಂದ ಎಂ. ಶೆಟ್ಟಿ ತೋನ್ಸೆ ಮುಂಬೈ , ತುಳುನಾಡ ರಕ್ಷಣಾ ವೇದಿಕೆಯ ಅಂತಾರಾಷ್ಟ್ರೀಯ ಗೌರವಾದ್ಯಕ್ಷ ಡಾ.ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ದುಬೈ ,
ಖ್ಯಾತ ಉದ್ಯಮಿ ಜಗದೀಶ್ ಶೆಟ್ಟಿ ಬೋಳಾರ್, ಮುಂಬೈ ಉದ್ಯಮಿ ಫ್ರಾನ್ಸಿಸ್ ರಸ್ಕಿನಾ, ರಂಗಭೂಮಿ ಕಲಾವಿದ ವಿಜೆ ಪಾಲ್ ಮತ್ತಿತರರು ಉಪಸ್ಥಿತರಿದ್ದರು.

ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಗಣ್ಯರನ್ನು ಸ್ವಾಗತಿಸಿದರು. ವಿಶ್ವ ತುಳುವರ ಸಮ್ಮೇಳನ-2023 ರ ಮೂರು ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಇತರ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಈ ಸಂದರ್ಭದಲ್ಲಿ ವಿದೇಶದಿಂದ ಮತ್ತು ದೇಶದ ಹಲವಾರು ಭಾಗಗಳಿಂದ ಜನರು ಭಾಗವಹಿಸುತ್ತಾರೆ. ಕಾರ್ಯಕ್ರಮಕ್ಕೆ 2 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗುವ ನಿರೀಕ್ಷೆ ಇದೆ. ವಿಶ್ವ ತುಳುವರ ಸಮ್ಮೇಳನ- 2023 ರ ಯಶಸ್ಸಿಗೆ ತುಳುನಾಡ ರಕ್ಷಣಾ ವೇದಿಕೆಯೊಂದಿಗೆ ಉದ್ಯಮಿಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈಜೋಡಿಸಲಿದ್ದಾರೆ. 2009ರಲ್ಲಿ ಸ್ಥಾಪನೆಯಾದ ತುಳುನಾಡ ರಕ್ಷಣಾ ವೇದಿಕೆಯು ಹಲವಾರು ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಅಪಾರ ಪ್ರಯತ್ನ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.




