Saturday, July 20, 2024
spot_img
More

    Latest Posts

    ಮಂಗಳೂರಿಗೆ ಸಭಾಧ್ಯಕ್ಷರಾಗಿ ಆಗಮಿಸಿದ ಯುಟಿ ಖಾದರ್ ; ಮುಗಿಬಿದ್ದ ಕಾರ್ಯಕರ್ತರು, ಅಭಿಮಾನಿಗಳು, ತಡೆದು ನಿಲ್ಲಿಸಿದ್ದಕ್ಕೆ ಪ್ರೋಟೋಕಾಲ್ ಏನೂ ಬೇಡ, ಬಿಡಿ ಎಂದು ಗದರಿದ ಸ್ಪೀಕರ್!

    ಮಂಗಳೂರು: ವಿಧಾನಸಭೆ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಯುಟಿ ಖಾದರ್ ಮಂಗಳೂರಿಗೆ ಆಗಮಿಸಿದ್ದರು. ನಗರದ ಕದ್ರಿಯ ಸರ್ಕಾರಿ ಅತಿಥಿ ಬಂಗಲೆಗೆ ಖಾದರ್ ಬರುತ್ತಾರೆಂದು ತಿಳಿದು ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಸರ್ಕಿಟ್ ಹೌಸ್ ಆವರಣದಲ್ಲಿ ಸೇರಿದ್ದರು. ಆದರೆ ವಿಧಾನಸಭೆ ಅಧ್ಯಕ್ಷರು ಬರುತ್ತಿರುವುದರಿಂದ ಪ್ರೋಟೊಕಾಲ್ ನಿಯಮದ ಪ್ರಕಾರ, ಪೊಲೀಸರು ಯಾರನ್ನೂ ಒಳಗೆ ಬಿಟ್ಟಿರಲಿಲ್ಲ. ಸರ್ಕಿಟ್ ಹೌಸ್ ಕಟ್ಟಡದ ಹೊರಗಡೆಯೇ ಬೆಳಗ್ಗೆ ಹತ್ತು ಗಂಟೆವರೆಗೂ ಜನ ಕಾದು ನಿಂತಿದ್ದಾರೆ.

    ಯುಟಿ ಖಾದರ್ ವಿಧಾನಸಭೆ ಅಧ್ಯಕ್ಷರಿಗೆ ಮೀಸಲಾದ ಕಾರಿನಲ್ಲಿ ಒಳಗೆ ಬರುತ್ತಿದ್ದಂತೆ ತಡೆದು ನಿಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳನ್ನು ಒಳಗೆ ಬಿಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕಾರ್ಯಕರ್ತರು ಸರದಿಯಲ್ಲಿ ಬಂದು ಖಾದರ್ ಅವರಿಗೆ ಶುಭಾಶಯಗಳನ್ನು ಹೇಳಿದರು. ಮಹಿಳೆಯರು, ವೃದ್ಧರು ಸೇರಿದಂತೆ ಉಳ್ಳಾಲ ಮತ್ತು ಮಂಗಳೂರು ಭಾಗದ ಹಲವಾರು ಮುಖಂಡರು, ಕಾರ್ಯಕರ್ತರು ಆಗಮಿಸಿದ್ದು, ಖಾದರ್ ಜೊತೆಗೆ ಫೋಟೋಗಳನ್ನು ತೆಗೆದು ಸಂಭ್ರಮಿಸಿದರು. ಸರ್ಕಿಟ್ ಹೌಸ್ ಬಂಗಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೋ ಅನ್ನುವ ಸ್ಥಿತಿ ಎದುರಾಗಿತ್ತು.

    ನಿಜಕ್ಕಾದರೆ, ವಿಧಾನಸಭೆ ಸ್ಪೀಕರ್ ಯಾವುದೇ ಪಕ್ಷಕ್ಕೂ ಒಳಪಡದ ವ್ಯಕ್ತಿಯಾಗಿರುವುದರಿಂದ ಪಕ್ಷದ ಕಾರ್ಯಕರ್ತರಾಗಿ ಅಭಿನಂದಿಸುವುದು, ಹೂಗುಚ್ಚ ನೀಡುವಂತಿಲ್ಲ. ಸಭಾಧ್ಯಕ್ಷ ಹುದ್ದೆ ರಾಜ್ಯಪಾಲರ ರೀತಿ ಸಾಂವಿಧಾನಿಕ ಹುದ್ದೆಯಾಗಿರುವುದರಿಂದ ಜನಸಾಮಾನ್ಯರು ಹತ್ತಿರ ಹೋಗುವಂತಿಲ್ಲ ಎಂಬ ನಿಮಯ ಇದೆ. ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಆಯಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಡಬೇಕಿರುತ್ತದೆ. ಅಲ್ಲದೆ, ವಿಧಾನಸಭೆಯ 224 ಸದಸ್ಯರಿಗೂ ಅಧ್ಯಕ್ಷರೇ ಸುಪ್ರೀಂ ಆಗಿರುತ್ತಾರೆ. ವಿಧಾನಸಭೆಯಲ್ಲಿ ಯಾವುದೇ ಕಡತ ಆಚೀಚೆ ಹೋಗುವುದಿದ್ದರೂ, ಸ್ಪೀಕರ್ ಅನುಮತಿ ಅಗತ್ಯವಿರುತ್ತದೆ. ಶಾಸಕರು ದುರ್ನಡತೆ ತೋರಿದರೆ, ಅವರನ್ನು ಹೊರಕ್ಕೆ ಹಾಕುವ, ಅನರ್ಹ ಮಾಡುವ ಅಧಿಕಾರವೂ ಇರುತ್ತದೆ. ಅಷ್ಟೇ ಅಲ್ಲದೆ, ಸರಕಾರದ ನಿಲುವನ್ನು ಸಮರ್ಥಿಸುವುದು, ವಿರೋಧಿಸುವುದು, ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ವಿರೋಧ ಪಕ್ಷವನ್ನು ಟೀಕಿಸುವುದು, ಆ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ಕೊಡುವುದು ಇತ್ಯಾದಿ ಮಾಡುವಂತಿಲ್ಲ. ಹಾಗಾಗಿ ವಿಧಾನಸಭೆ ಅಧ್ಯಕ್ಷರು ಅಂದರೆ, ಪ್ರತ್ಯೇಕ ಮತ್ತು ಜನಸಾಮಾನ್ಯರಿಂದ ದೂರ ಇರುವ ಹುದ್ದೆ ಎಂಬ ಭಾವನೆ ಜನರಲ್ಲಿದೆ.

    ಆದರೆ ವಿಧಾನಸಭೆಗೆ ಅಧ್ಯಕ್ಷನಾದರೂ, ಉಳ್ಳಾಲಕ್ಕೆ ನಾನೇ ಶಾಸಕ ಎಂದು ಹೇಳಿದ ಖಾದರ್ ತನ್ನ ಕ್ಷೇತ್ರದ ಜನರಿಗೆ ಯಾವತ್ತಿಗೂ ನಾನು ಸಿಗುತ್ತೇನೆ, ಉಳ್ಳಾಲ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ. ಸ್ಪೀಕರ್ ಆಗಿ ದೂರ ಹೋಗುತ್ತೇನೆ ಎಂಬ ಭ್ರಮೆ ಬೇಡ. ಈ ಸ್ಥಾನ ನನ್ನ ಕೆಲಸ, ಜನಸೇವೆಗೆ ಅಡ್ಡಿ ಬರೋದಿಲ್ಲ. ನಾನು ಅದಕ್ಕೆ ಅಡ್ಡಿಪಡಿಸಲ್ಲ ಎಂದು ಹೇಳಿದರು. ಸಭಾಧ್ಯಕ್ಷ ಸ್ಥಾನದಲ್ಲಿದ್ದು ಅದರ ಗೌರವ ಉಳಿಸಿಕೊಂಡು ಜಿಲ್ಲೆಗೆ ಮತ್ತು ಕ್ಷೇತ್ರಕ್ಕೆ ಗೌರವ ತರುತ್ತೇನೆ. ಕ್ಷೇತ್ರದ ಜನರಿಗೆ ಸಭಾಧ್ಯಕ್ಷ ಸ್ಥಾನದ ಬಗ್ಗೆ ಹೆಚ್ಚು ಅರಿವು ಇಲ್ಲ. ಇದರಿಂದ ನಾನು ಅವರ ಕೈಗೆ ಸಿಗಲ್ಲ ಅನ್ನುವ ಪ್ರೀತಿಯ ಆತಂಕ ಇದೆ. ಕೆಲವೇ ತಿಂಗಳಲ್ಲಿ ಇದರ ಅರಿವು ಆಗಲಿದೆ ಎಂದು ಖಾದರ್ ಹೇಳಿದರು.

    ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಿದ್ದೇನೆ. ವಯಸ್ಸಿನಲ್ಲಿ ನಾನು ಕಿರಿಯ, ಐದು ಬಾರಿ ಶಾಸಕನಾದ ಅನುಭವದಲ್ಲಿ ನನ್ನನ್ನು ಈ ಹುದ್ದೆಗೆ ಪರಿಗಣಿಸಿದ್ದಾರೆ. ನಾನು ಮಂತ್ರಿಯಾಗಿದ್ದರೆ ಒಂದು ಇಲಾಖೆಗೆ ಮಾತ್ರ ಮಂತ್ರಿ. ಈಗ ಎಲ್ಲ ಇಲಾಖೆಯ ಮಂತ್ರಿಗಳು ಕೂಡ ನನ್ನ ವ್ಯಾಪ್ತಿಗೆ ಬರುತ್ತಾರೆ. ಆಮೂಲಕ ನನ್ನ ಕ್ಷೇತ್ರದ ಕೆಲಸ ಮಾಡಿಸಿಕೊಳ್ಳುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಖಾದರ್ ಉತ್ತರಿಸಿದರು. ಹಿಜಾಬ್ ನಿಷೇಧ ತೆರವು ಮಾಡುತ್ತಾರೆಯೇ ಎಂಬ ಪ್ರಶ್ನೆಗೆ, ಕೆಲವು ಸಂವಿಧಾನಬದ್ಧ ವಿಷಯಗಳು ಸುಪ್ರೀಂ ಕೋರ್ಟ್ ನಲ್ಲಿ ಇವೆ, ಸಂವಿಧಾನಕ್ಕೆ ವಿರುದ್ಧವಾಗಿ ಸರ್ಕಾರ ಕೆಲಸ ಮಾಡಲ್ಲ. ಸಭಾಧ್ಯಕ್ಷನಾದ ಹಿನ್ನೆಲೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಟ್ಟಿದ್ದೇನೆ. ಹಾಗಾಗಿ ನನ್ನ ವ್ಯಾಪ್ತಿಯಲ್ಲಿ ಮಾತ್ರ ಅಭಿಪ್ರಾಯ ಹಂಚಿಕೊಳ್ಳುತ್ತೇನೆ. ಸಭಾಧ್ಯಕ್ಷ ಸ್ಥಾನ ಉತ್ಸವ ಮೂರ್ತಿ ಅಲ್ಲ, ಅದು ಪೀಠದ ಸಮಸ್ಯೆ ಅಲ್ಲ, ಅಲ್ಲಿ ಕೂರುವವರ ಸಮಸ್ಯೆ, ಕೂತವರು ಸರಿ ಇದ್ರೆ ಎಲ್ಲವೂ ಸರಿಯಾಗಿರತ್ತೆ. ಪ್ರೋಟೋಕಾಲ್ ಅಂತೇನಿಲ್ಲ. ಜನಸಾಮಾನ್ಯರಿಗೂ ನನ್ನನ್ನು ತಲುಪಲು ಅವಕಾಶ ಮಾಡಿಕೊಡಿ ಅಂತ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss