ಪುತ್ತೂರು: ಸರ್ಕಾರಿ ಕಚೇರಿಗಳಿಗೆ ಜನರು ಅಲೆದಾಡುವ ಪರಿಸ್ಥಿತಿ ಬದಲಾಗಬೇಕು. ಅಧಿಕಾರಿಗಳು ಜನರ ಬಳಿಗೆ ತೆರಳಿ ಸೇವೆ ನೀಡುವ ವ್ಯವಸ್ಥೆ ನಿರ್ಮಾಣವಾಗಬೇಕು. ಸರ್ಕಾರಿ ಸೇವೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ, ಜನರಿಗೆ ನೇರವಾಗಿ ಸೇವೆ ತಲುಪಿಸುವ ಉದ್ದೇಶದಿಂದ ಪ್ರಜಾಸೇವೆ ಆಂದೋಲನ ಆರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಪುತ್ತೂರು ಪುರಭವನದಲ್ಲಿ ಶನಿವಾರ ಪ್ರಜಾಸೇವಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರಜಾಸೇವೆ ಆಂದೋಲನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಜನಸಂಪರ್ಕ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಅವುಗಳಿಗೆ ನಿಗದಿತ ಗಡುವು ಇರಲಿಲ್ಲ. ಆದರೆ ಪ್ರಜಾಸೇವೆ ಆಂದೋಲನದಲ್ಲಿ ಅರ್ಜಿ ಸಲ್ಲಿಸಿದ ಬಳಿಕ 21 ದಿನಗಳೊಳಗೆ ಪರಿಹಾರ ಒದಗಿಸುವ ಗುರಿ ಹೊಂದಲಾಗಿದೆ. ಕಾನೂನಾತ್ಮಕವಾಗಿ ಪರಿಹರಿಸಬಹುದಾದ ಸಮಸ್ಯೆಗಳಿಗೆ ಅಧಿಕಾರಿಗಳು ಕೇವಲ ಕಡತದ ದೃಷ್ಟಿಯಿಂದಲ್ಲ, ‘ಹೃದಯದಿಂದ’ ಸ್ಪಂದಿಸಬೇಕು ಎಂದು ಸಚಿವರು ಸೂಚಿಸಿದರು.
ಅರ್ಜಿಗೆ ಸ್ಪಂದಿಸದ ಅಥವಾ ಜನರ ಸಮಸ್ಯೆಗಳನ್ನು ಆಲಿಸದ ಅಧಿಕಾರಿಗಳ ವಿರುದ್ಧದ ದೂರುಗಳನ್ನು ಪರಿಶೀಲಿಸಲು ಮುಂದಿನ ದಿನಗಳಲ್ಲಿ ಪ್ರತ್ಯೇಕ ವಿಭಾಗವೊಂದನ್ನು ತೆರೆಯುವ ಚಿಂತನೆಯೂ ಇದೆ. ಈ ಮೂಲಕ ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಉದ್ದೇಶ ಸರ್ಕಾರಕ್ಕಿದೆ ಎಂದರು.
ಪ್ರತಿಯೊಂದು ಸಮಸ್ಯೆಯನ್ನೂ ಶೇ.100ರಷ್ಟು ಪರಿಹರಿಸಲು ಸಾಧ್ಯವಾಗದಿದ್ದರೂ, ಕಾನೂನಿನ ಚೌಕಟ್ಟಿನೊಳಗೆ ಪರಿಹರಿಸಬಹುದಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಇದಕ್ಕೆ ಜನರ ಸಹಕಾರ ಹಾಗೂ ತಾಳ್ಮೆಯೂ ಅಗತ್ಯ ಎಂದರು.
“ಬಡವರಿಗೆ ನ್ಯಾಯ ಒದಗಿಸುವುದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜವಾಬ್ದಾರಿ. ಜನರ ನಂಬಿಕೆಗೆ ತಕ್ಕಂತೆ ವಿಶ್ವಾಸಭರಿತ ಆಡಳಿತ ನೀಡುವುದು ಸರ್ಕಾರದ ಗುರಿ” ಎಂದು ಖಾದರ್ ಹೇಳಿದರು.
ಮುಂದಿನ ಹಂತದಲ್ಲಿ ಹೋಬಳಿ ಮಟ್ಟದಲ್ಲಿಯೂ ಪ್ರಜಾಸೇವೆ ಆಂದೋಲನ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಧರ್ಮ-ಜಾತಿ ಮೀರಿ ಮಕ್ಕಳು ಕೈ ಕೈ ಹಿಡಿದು ನಡೆಯುವ ಸಮಾಜ ಬೇಕು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯವನ್ನು ಬದಿಗಿಟ್ಟು ಉತ್ತಮ ವ್ಯವಸ್ಥೆ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಧಾರ್ಮಿಕತೆ ಎಂದಿಗೂ ನಮ್ಮ ದೌರ್ಬಲ್ಯವಾಗಬಾರದು. ಸಣ್ಣಪುಟ್ಟ ಘಟನೆಗಳನ್ನು ದೊಡ್ಡದಾಗಿಸುವ ಮನೋಭಾವದಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದರು.
“ಈ ಭೂಮಿ ನಮಗೆ ಮಾತ್ರ ಸೇರಿದ್ದಲ್ಲ. ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನು ನಿರ್ಮಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಗರದ ರಸ್ತೆಯಲ್ಲಿ ನಮ್ಮ ಮಕ್ಕಳು ಧರ್ಮ, ಜಾತಿಯ ಭೇದವಿಲ್ಲದೆ ಕೈ ಕೈ ಹಿಡಿದು ನಡೆಯುವಂತಹ ವಾತಾವರಣ ನಿರ್ಮಿಸಬೇಕು. ಧರ್ಮದ ಸಂದೇಶವು ಮತ್ತೊಬ್ಬರ ನೋವನ್ನು ನಿವಾರಿಸುವಂತಿರಬೇಕು” ಎಂದು ಸಚಿವರು ಹೇಳಿದರು.
“ಶಾಂತಿಯನ್ನು ನಮ್ಮ ಕೈಗೆ ಕೊಡಿ; ಅಭಿವೃದ್ಧಿಯನ್ನು ನಿಮ್ಮ ಕಾಲಬುಡಕ್ಕೆ ತಂದುಕೊಡುತ್ತೇವೆ. ನಾವು ಮುಂದೆ ಸಾಗುವುದರ ಜೊತೆಗೆ ನಮ್ಮ ಹಿಂದೆ ಉಳಿದವರ ಕೈ ಹಿಡಿದು ಮುನ್ನಡೆಸೋಣ” ಎಂದು ಕರೆ ನೀಡಿದರು.
ಯುವಜನರ ಚಿಂತನೆಗಳಿಗೆ ಪೂರಕವಾಗಿ ₹1,000 ಕೋಟಿ ಅನುದಾನದ ಮೂಲಕ ಪ್ರತಿಯೊಂದು ಗ್ರಾಮದಲ್ಲಿಯೂ ‘ಜೊಡೋ ಭಾರತ್’ ಸಂಘಟನೆ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಪ್ರತಿಯೊಂದು ಗ್ರಾಮಕ್ಕೂ ತನ್ನದೇ ಆದ ಸಂಸ್ಕೃತಿ, ಪರಂಪರೆ ಹಾಗೂ ವೈಶಿಷ್ಟ್ಯವಿದ್ದು, ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಸಂಘಟನೆ ಕಾರ್ಯನಿರ್ವಹಿಸಲಿದೆ ಎಂದರು.
ಬಡವರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಲಿ: ಅಶೋಕ್ ರೈ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಪ್ರಜಾಸೇವೆ ಆಂದೋಲನ ಆರಂಭಿಸಲಾಗಿದೆ. ಆದರೆ ಯೋಜನೆಯ ಯಶಸ್ಸು ಕಾರ್ಯಾಂಗದ ಸಮರ್ಪಕ ಕಾರ್ಯನಿರ್ವಹಣೆಯ ಮೇಲೆ ಅವಲಂಬಿತವಾಗಿದೆ ಎಂದರು.
ರೈತರು ಸೇರಿದಂತೆ ತಳಮಟ್ಟದ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಜನರ ಕಷ್ಟ ಮತ್ತು ನೋವುಗಳಿಗೆ ಸ್ಪಂದಿಸುವ ಆಡಳಿತ ವ್ಯವಸ್ಥೆ ಅಗತ್ಯ ಎಂದು ಹೇಳಿದರು.
ಮನೆಗಳಿಗೆ ಎನ್ಒಸಿ ಇಲ್ಲದೆ ವಿದ್ಯುತ್ ಸಂಪರ್ಕ ನೀಡದಿರುವ ಸಮಸ್ಯೆ ಹಿಂದೆ ಇತ್ತು. ಇದೀಗ 2,800 ಚದರ ಅಡಿ ವಿಸ್ತೀರ್ಣದ ಕಟ್ಟಡಗಳಿಗೆ ಯಾವುದೇ ಎನ್ಒಸಿ ಅಗತ್ಯವಿಲ್ಲ ಎಂಬ ನಿಯಮ ಜಾರಿಯಲ್ಲಿದೆ. ಅಕ್ರಮ-ಸಕ್ರಮ ಯೋಜನೆಯ ಆ್ಯಪ್ನಲ್ಲಿರುವ ಸಮಸ್ಯೆಗಳನ್ನೂ ರಾಜ್ಯ ಸರ್ಕಾರ ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.
4057 ಬಾಕಿ ಅರ್ಜಿಗಳ ಪೈಕಿ 1651 ಮಂದಿಗೆ ಪಹಣಿ ವಿತರಣೆ
ಪ್ರಜಾಸೇವೆ ಆಂದೋಲನದಲ್ಲಿ ವಿವಿಧ ಇಲಾಖೆಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು.
ಕೋವಿ ಪರವಾನಗಿ, ಕಂದಾಯ ಇಲಾಖೆಯ ಅಕ್ರಮ-ಸಕ್ರಮ, ಫ್ಲ್ಯಾಟಿಂಗ್, ಆರ್ಟಿಸಿ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ಅನುದಾನದ ಬೇಡಿಕೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಅರ್ಜಿಗಳನ್ನು ಅಧಿಕಾರಿಗಳು ಸ್ವೀಕರಿಸಿ, ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.
ಸುಮಾರು 30 ವರ್ಷಕ್ಕೂ ಅಧಿಕ ಕಾಲ ಪೋಡಿಯಾಗದೆ ಬಾಕಿ ಉಳಿದಿದ್ದ 4,057 ಅರ್ಜಿಗಳ ಪೈಕಿ 1,651 ಮಂದಿಗೆ ಪಹಣಿ ಪತ್ರಗಳನ್ನು ವಿತರಿಸಲಾಯಿತು.
ಇದೇ ವೇಳೆ ಅಗ್ನಿಶಾಮಕ ದಳದ ವತಿಯಿಂದ ಗ್ರಾಮೀಣ ಪ್ರದೇಶದ 300 ಮಂದಿಗೆ ತರಬೇತಿ ನೀಡಲಾಗಿದ್ದು, ಅವರಲ್ಲಿ 25 ಮಂದಿಗೆ ಸುರಕ್ಷಾ ಕಿಟ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದರ್ಶನ್ ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಹರ್ಷಿತ್ ಡೋಂಗ್ರೆ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಡೆ, ಡಿಎಫ್ಒ ರವಿಶಂಕರ್, ಪುತ್ತೂರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಹಾಗೂ ತಹಶೀಲ್ದಾರ್ ಎಸ್.ಬಿ. ಕೂಡಲಗಿ ಉಪಸ್ಥಿತರಿದ್ದರು.

