ಉಡುಪಿ: ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳ ಒತ್ತುವರಿ ಕಾರ್ಯವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅದ್ಯತೆ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು.
ಭೈರಂಪಳ್ಳಿ ಗ್ರಾಮ ವ್ಯಾಪ್ತಿಯ ಶಿರೂರು ಗ್ರಾಮದಲ್ಲಿ ಶನಿವಾರ ನಡೆದ “ಜಿಲ್ಲಾಧಿಕಾರಿ ನಡೆ ಹಳ್ಳಿ ನಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ಉದ್ದೇಶದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ವಿವಿಧ ಪ್ರದೇಶದಲ್ಲಿ ಜಾಗಗಳನ್ನು ಕಾಯ್ದಿರಿಸಲಾಗಿದೆ. ಇಂತಹ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ಕ್ರಮ ಕೈಗೊಂಡು, ಒತ್ತುವರಿ ತೆರವು ಕಾರ್ಯಾಚರಣೆಗೆ ಆದ್ಯತೆ ನೀಡಿ, ತೆರವುಗೊಂಡ ಜಾಗಗಳನ್ನು ಸಾರ್ವಜನಿಕ ಉದ್ದೇಶಗಳಿಗಾಗಿಯೇ ಬಳಸಲಾಗುವುದು ಎಂದರು.
ಜಿಲ್ಲೆಯಲ್ಲಿ ಪ್ರತೀ ತಿಂಗಳ 3ನೇ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ಯವ್ಯ ಕಾರ್ಯಕ್ರಮ ನಡೆಸುತ್ತಿದ್ದು, ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರ ಒದಗಿಸುವ ಜತೆಗೆ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ, ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಾರ್ವಜನಿಕರು ಕಾರ್ಯಕ್ರಮದ ಸಂಪೂರ್ಣ ಪ್ರಯೋಜನ ಪಡೆಯುವಂತೆ ತಿಳಿಸಿದರು.
ವಿವಿಧ ಯೋಜನೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಆರೋಗ್ಯ ಇಲಾಖೆ ಮತ್ತು ಆಯುಷ್ ಇಲಾಖೆವತಿಯಿಂದ ಆರೋಗ್ಯ ಶಿಬಿರ, ಕಾರ್ಮಿಕ ಇಲಾಖೆ ವತಿಯಿಂದ ಇ-ಶ್ರಮ್ ನೋಂದಣಿ ಏರ್ಪಡಿಸಲಾಗಿತ್ತು.
