ಮಲ್ಪೆ: ಬೆಂಗಳೂರಿನಿಂದ ಪ್ರವಾಸಕ್ಕೆ ಮಲ್ಪೆ ಬೀಚ್‌ಗೆ ಬಂದಿದ್ದ ಸಂದರ್ಭ ಜತೆಯಲ್ಲಿದ್ದ ಯುವಕ ನಾಪತ್ತೆಯಾಗಿ ಸುಮಾರು 6 ಗಂಟೆ ಹುಡುಕಾಟದ ಬಳಿಕ ಆತ ಸೀ ವಾಕ್ ವೇ ಬಳಿ ಕಲ್ಲಿನ ಮೇಲೆ ಪತ್ತೆಯಾಗಿದ್ದಾನೆ.
ಬೆಂಗಳೂರಿನ ಹೊಸಕೆರೆ ಹಳ್ಳಿಯ ಮಂಜುನಾಥ (23) ಒಮೇಗ ಹೆಲ್ತ್ ಕೇರ್‌ನ ಉದ್ಯೋಗಿ. ಇತರ 6 ಮಂದಿ ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಿದ್ದರು. ರವಿವಾರ ಬೆಳಗ್ಗೆ ಮಲ್ಪೆ ಬೀಚ್‌ಗೆ ಬಂದು ರೆಸಾರ್ಟ್ ನಲ್ಲಿ ತಂಗಿದ್ದರು. ಅಪರಾಹ್ನ 3 ಗಂಟೆಗೆ ಎಲ್ಲರೂ ಸಮುದ್ರದಲ್ಲಿ ಈಜಾಡುತ್ತಿದ್ದರು. ಈ ಪೈಕಿ ಮಂಜುನಾಥ್ ಪಾನಮತ್ತನಾಗಿದ್ದು, ಜತೆಯಲ್ಲಿದ್ದವರು ಆತನನ್ನು ನೀರಿನಿಂದ ಮೇಲೆ ಕಳುಹಿಸಿದ್ದರು.
ಸ್ವಲ್ಪ ಸಮಯ ಬಿಟ್ಟು ಎಲ್ಲರೂ ಮೇಲೆ ಬಂದಾಗ ಮಂಜುನಾಥ್ ನಾಪತ್ತೆಯಾಗಿದ್ದರು. ರೂಮಿನಲ್ಲೂ ಇರಲಿಲ್ಲ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸಮುದ್ರದಲ್ಲಿ ಮುಳುಗಿರಬಹುದೇ ಎನ್ನುವ ಅನುಮಾನದಿಂದ ಪೊಲೀಸರು ಮುಳುಗು ತಜ್ಞ ಈಶ್ವರ್ ಮಲ್ಪೆಯನ್ನು ಕರೆಯಿಸಿ ಸಮುದ್ರ ತೀರದ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ.
ಪಾನಮತ್ತನಾದ ಆತ ಬೀಚ್‌ನಿಂದ ನಡೆಯುತ್ತಾ ಹೋಗಿ ಸೀ ವಾಕ್ ಬಳಿ ಕಲ್ಲಿನ ಬೆಂಚ್ ಮೇಲೆ ಮಲಗಿದ್ದ. ಈಶ್ವರ್ ಮಲ್ಪೆ ಅವರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಜತೆಯಲ್ಲಿದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.