Sunday, September 8, 2024
spot_img
More

    Latest Posts

    ಒಂದು ಚಾರ್ಜಿಗೆ 475 ಕಿಲೋಮೀಟರ್‌ ಮೈಲೇಜ್‌ ಮೂಲಕ ಭಾರತದಲ್ಲಿ ಮೋಡಿ ಮಾಡಲಿದೆಯಾ ಕಿಯಾ ಎಲೆಕ್ಟ್ರಿಕ್‌ ಕಾರು ?

    ನವದೆಹಲಿ ; ಇಂದು ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಜನರ ಚಿತ್ತ ಎಲೆಕ್ಟ್ರಿಕ್‌ ವಾಹನಗಳತ್ತ ಹರಿಯುತ್ತಿದೆ. ಈ ವಾಹನಗಳ ನಿರ್ವಹಣಾ ವೆಚ್ಚ ಮತ್ತು ಒಂದು ಕಿಲೋಮೀಟರ್‌ ದೂರ ಪ್ರಯಾಣಿಸಿದರೆ ಆಗುವ ಪ್ರಯಾಣ ವೆಚ್ಚ ಕೂಡ ಬೈಕ್‌ ಗಿಂತಲೂ ಕಡಿಮೆ ಆಗುತ್ತದೆ. ಭಾರತದಂತ ದೇಶದ ಜನರಿಗೆ ಈ ಕಾರುಗಳು ಈಗ ದುಬಾರಿ ಆಗಿದ್ದರೂ ಈ ತಂತ್ರ ಜ್ಞಾನದಲ್ಲಿ ದಿನೇ ದಿನೇ ಅವಿಷ್ಕಾರಗಳು ನಡೆಯುತಿದ್ದು ಮುಂದಿನ ವರ್ಷಗಳಲ್ಲಿ ಕಾರಿನ ದರ ಕೂಡ ಕಡಿಮೆ ಆಗಲಿದೆ .
    ದಕ್ಷಿಣ ಕೊರಿಯಾದ ಎರಡನೇ ಅತಿದೊಡ್ಡ ಕಾರು ತಯಾರಕ ಕಂಪನಿ ಕಿಯಾ ಕೊರಿಯಾದಲ್ಲಿಯೇ ಸಂಪೂರ್ಣ ಎಲೆಕ್ಟ್ರಿಕ್ ಸೆಡಾನ್ ಕಾರು ಕಿಯಾ ಇವಿ 6 (Kia EV6) ಅನ್ನು ಕಳೆದ ತಿಂಗಳು ಬಿಡುಗಡೆ ಮಾಡಿದ್ದು ಈ ಕಾರು ಇವಿ-ಒನ್ಲಿ ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (E-GMP) ಅಳವಡಿಸಲಾಗಿದೆ. ಈ ಕಾರು ಅಲ್ಲಿನ ವಾಹನ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದು, ಹೊಸ ಕಾರನ್ನು 30,000 ಕ್ಕೂ ಅಧಿಕ ಜನರು ಬುಕ್‌ ಮಾಡಿದ್ದಾರೆ. ಈ ಕಾರಿಗೆ ಯುರೋಪ್ ಮತ್ತು ಅಮೇರಿಕಾದಲ್ಲೂ ಭಾರೀ ಬೇಡಿಕೆ ಕಂಡು ಬಂದಿದೆ. ಅದರಂತೆ Kia EV6 ಮೊದಲ ಆವೃತ್ತಿಗಾಗಿ 8,800 ಪ್ರಿ-ಆರ್ಡರ್ ಸ್ವೀಕರಿಸಿದ್ದೇವೆ ಎಂದು ಕಂಪನಿ ಹೇಳಿದೆ.
    ಮಾಧ್ಯಮ ವರದಿಗಳ ಪ್ರಕಾರ, ಕಿಯಾ ಮೋಟಾರ್ಸ್ ಕೊರಿಯಾದಲ್ಲಿ ತನ್ನ ಮೊದಲ ಆವೃತ್ತಿಯ 13,000 ಕಾರುಗಳನ್ನು ಮತ್ತು ವಿದೇಶಿ ಮಾರುಕಟ್ಟೆಯಲ್ಲಿ 17,000 ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹಾಕಿಕೊಂಡಿದೆ . ಹೊಂದಿದೆ. ದಕ್ಷಿಣ ಕೊರಿಯಾದಲ್ಲಿ EV6 ನ ಬೆಲೆ $ 40,800 ರಿಂದ $ 49,500 ವರೆಗೆ ಇರಲಿದೆ.
    ಕಂಪನಿಯು ಆಲ್-ಎಲೆಕ್ಟ್ರಿಕ್ ಕಿಯಾ ಇವಿ 6 ಅನ್ನು ಎರಡು ರೀತಿಯ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಪರಿಚಯಿಸಿದೆ. ಇದು ಪ್ರಮಾಣಿತ 58 kWh ಬ್ಯಾಟರಿ ಪ್ಯಾಕ್ ಮತ್ತು ದೀರ್ಘ ಶ್ರೇಣಿಯ 77.4-KWh ಸಾಮರ್ಥ್ಯದ ಬ್ಯಾಟರಿಯಿಂದ ಚಾಲಿತವಾಗಲಿದೆ. ಅಂದರೆ 58-kWh ಬ್ಯಾಟರಿಯನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದ್ರೆ ಬರೋಬ್ಬರಿ 370 ಕಿಮೀ ಚಲಿಸಬಹುದು. ಹಾಗೆಯೇ ಮತ್ತು 77.4-kWh ಬ್ಯಾಟರಿ ಪ್ಯಾಕ್​ನ ಒಮ್ಮೆ ಪೂರ್ತಿ ಮಾಡಿದರೆ ಬರೋಬ್ಬರಿ 475 ಕಿಮೀ ವರೆಗೆ ಚಲಿಸಬಹುದು ಎಂದು ಕಂಪೆನಿ ತಿಳಿಸಿದೆ.
    ಈ ಕಾರಿನಲ್ಲಿ 5.2 ಸೆಕೆಂಡುಗಳಲ್ಲಿ ಶೂನ್ಯದಿಂದ ಗಂಟೆಗೆ 60 ಮೈಲುಗಳ (ಸುಮಾರು 97 ಕಿಲೋಮೀಟರ್) ವೇಗವನ್ನು ಪಡೆಯಬಹುದು. ಹಾಗೆಯೇ ಕೇವಲ 18 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ 210 ಮೈಲುಗಳ (338 ಕಿಮೀ) ವ್ಯಾಪ್ತಿಯವರೆಗೆ ಚಲಿಸಬಹುದು. ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಫಾಸ್ಟ್ ಚಾರ್ಜಿಂಗ್ ಬ್ಯಾಟರಿ ನೀಡಲಾಗಿದ್ದು, ಇದಕ್ಕೆ 10 ವರ್ಷಗಳ ವಾರೆಂಟಿಯನ್ನು ಕೂಡ ಕಂಪೆನಿ ನೀಡಿದೆ.
    ಇದು ಭಾರತದ ಮಾರುಕಟ್ಟೆಯಲ್ಲಿ ಸುಮಾರು 41 ರಿಂದ 45 ಲಕ್ಷ ರೂ.ಗೆ ಲಭಿಸಲಿದೆ ಎಂದು ಕಂಪೆನಿ ಮೂಲಗಳು ತಿಳಿಸಿದ್ದು ತಂತ್ರಜ್ಞಾನ ಬೆಳೆಯುತ್ತ ಹೋದಂತೆ ಈ ಕಾರುಗಳೂ ಜನ ಸಾಮಾನ್ಯರ ಕೈಗೆಟುಕಲು ಕನಿಷ್ಟ 10 ವರ್ಷವಾದರೂ ಬೇಕಾಗುತ್ತದೆ ಎಂಬುದು ವಾಹನ ತಜ್ಞರ ಅಭಿಮತ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss