ಮಂಗಳೂರು: ‘ನಮ್ಮ ಸನಾತನ ಸಂಸ್ಕೃತಿ – ಸಂಪ್ರದಾಯಗಳನ್ನು ವಿವಿಧ ಕಥಾನಕಗಳ ಮೂಲಕ ಜನಮಾನಸಕ್ಕೆ ಮುಟ್ಟಿಸುವ ಸುಸಂಸ್ಕೃತ ಕಲೆ ಯಕ್ಷಗಾನ. ಅದರಲ್ಲೂ ತಾಳಮದ್ದಳೆ ಪ್ರಕಾರದಲ್ಲಿ ಪೌರಾಣಿಕ ಕಥೆಗಳೊಂದಿಗೆ ಕಲಾವಿದರು ವಿವರಿಸಿ ಹೇಳುವ ಜೀವನ ಮೌಲ್ಯಗಳು ಹಲವಾರಿವೆ. ಅದನ್ನು ನುಡಿ ಹಬ್ಬದ ರೂಪದಲ್ಲಿ ಪ್ರತಿ ವರ್ಷ ನಡೆಸುವ ಯಕ್ಷಾಂಗಣವು ತನ್ನ ದಶಮಾನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಮುಂದೆ ಅದು ಶತಮಾನ ಕಾಣುವಂತಾಗಲಿ’ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.
ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ‘ಯಕ್ಷಾಂಗಣ ಮಂಗಳೂರು’ ಇದರ ದಶಮಾನೋತ್ಸವ ಪ್ರಯುಕ್ತ ಮಂಗಳೂರು ವಿ.ವಿ.ಡಾ.ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಜರಗಿದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2022’ ಹತ್ತನೇ ವರ್ಷದ ನುಡಿ ಹಬ್ಬ ಸಮಾರೋಪ ಸಮಾರಂಭದಲ್ಲಿ ಕಲಾವಿದರನ್ನು ಗೌರವಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪೂರ್ಣಿಮಾ, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಕಿಶೋರ್ ಕೊಟ್ಟಾರಿ ಅತಿಥಿಗಳಾಗಿ ಶುಭ ಹಾರೈಸಿದರು.
ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಮಹಿಳಾ ಕಾರ್ಯದರ್ಶಿ ಸುಮಾ ಪ್ರಸಾದ್ ವಂದಿಸಿದರು. ಜೊತೆ ಕಾರ್ಯದರ್ಶಿ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ನಿವೇದಿತಾ ಎನ್.ಶೆಟ್ಟಿ, ಅರುಣ ಎಸ್. ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.