Sunday, November 3, 2024
spot_img
More

    Latest Posts

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾಗಿರುವ ಹಿರಿಯ ಕಾಂಗ್ರೆಸ್ ಮುಖಂಡ ಎನ್.ಸುಧಾಕರ್ ಶೆಟ್ಟಿ ನಿಧನ

    ಪುತ್ತೂರು: ಇತಿಹಾಸ ಪ್ರಸಿದ್ಧ ಕಲೆ ಮೈದಾನದ ಸಾರ್ವಜನಿಕ ಮಹಾಗಣೇಶೋತ್ಸವದ ದೇವತಾ ಸಮಿತಿ ಅಧ್ಯಕ್ಷರು ಮತ್ತು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾಗಿರುವ ಹಿರಿಯ ಕಾಂಗ್ರೆಸ್ ಮುಖಂಡ ಎನ್.ಸುಧಾಕರ್ ಶೆಟ್ಟಿಯವರು ಸೆ.10ರಂದು ರಾತ್ರಿ ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ನಿಧನರಾದರು.ಮೃತ ದೇಹವನ್ನು ಇಂದು ಪುತ್ತೂರು ನೆಲ್ಲಿಕಟ್ಟೆಯಲ್ಲಿರುವ ನಿವಾಸಕ್ಕೆ ತರಲಾಗುವುದು ಎಂದು ಮಾಹಿತಿ ತಿಳಿದುಬಂದಿದೆ. ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು. ಮೃತರು ಪತ್ನಿ ಗೀತಾ, ಪುತ್ರರಾದ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಅಭಿಷೇಕ್ ಮತ್ತು ಅಭಿಜೀತ್ ರವರನ್ನು ಅಗಲಿದ್ದಾರೆ. 44 ವರ್ಷಗಳಿಂದ ದೇವತಾ ಸಮಿತಿ ಅಧ್ಯಕ್ಷರಾಗಿ ಸೇವೆ:ಶ್ರೀ ದೇವತಾ ಸಮಿತಿಯ ಕಿಲ್ಲೆ ಮೈದಾನದಲ್ಲಿ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವವನ್ನು 1957ರಲ್ಲಿ ದಿ.ಹನುಮಂತ ಮಲ್ಕ ಅವರು ಆರಂಭಿಸಿದ್ದರು. ಅವರ ಬಳಿಕ ಕಳೆದ 44 ವರ್ಷಗಳಿಂದ ಎನ್.ಸುಧಾಕರ್ ಶೆಟ್ಟಿಯವರು ಅದರ ನೇತೃತ್ವ ವಹಿಸಿ ಮುಂದುವರಿಸುತ್ತಾ ಬಂದಿದ್ದಾರೆ. 60ನೇ ವರ್ಷದಲ್ಲಿ 9 ದಿನಗಳ ಕಾಲ ನಿರಂತರ ಕಾರ್ಯಕ್ರಮ ನಡೆಸಿದ್ದು, ಬಳಿಕದ ದಿನಗಳಲ್ಲಿ 7 ದಿನಗಳು ನಿರಂತರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಯಲ್ಲಿ ಹಲವು ಸೇವೆ:ಎನ್.ಸುಧಾಕರ್ ಶೆಟ್ಟಿಯವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶ ಸಮಿತಿಯ ಉಪಾಧ್ಯಕ್ಷರಾಗಿ, ಬ್ರಹ್ಮರಥ ಸಮರ್ಪಣಾ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಅವರು ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿಯೂ ಹಲವು ವರ್ಷ ದೇವರ ಸೇವೆ ಮಾಡಿದರು. ಅವರ ಅವಧಿಯಲ್ಲಿ ದೇವಳದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ, ದೇವರ ಮೇಲೆ ಅಪಾರ ಭಕ್ತಿಯಿಟ್ಟಿದ್ದ ಅವರು ಪ್ರತಿ ದಿನ ಬೆಳಿಗ್ಗೆ ದೇವಳಕ್ಕೆ ಬರುತ್ತಿದ್ದರು. ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಸಂಚಾಲಕರಾಗಿ, 10 ವರ್ಷಗಳ ಕಾಲ ಪುತ್ತೂರು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಾಗಿ, 2 ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಲ್ಲದೆ ತನ್ನ ವಿದ್ಯಾರ್ಥಿ ದೆಸೆಯಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಥಮ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪ್ರಾಮಾಣಿಕ ವ್ಯಕ್ತಿತ್ವ ಮೆರೆದಿದ್ದರು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕ್ರಿಕೆಟ್ ಆಟಗಾರಾಗಿದ್ದ ಅವರು ಎನ್.ಎಸ್.ಯು.ಐ ಘಟಕದ ಅಧ್ಯಕ್ಷರಾಗಿ, ಬಳಿಕ ರಾಜಕೀಯ ಪ್ರವೇಶ ಮಾಡಿ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss