Sunday, September 8, 2024
spot_img
More

    Latest Posts

    ಉಳ್ಳಾಲ: ದ್ವಿಚಕ್ರ ವಾಹನದಲ್ಲಿ ಬಂದು ನರ್ಸಿಂಗ್ ವಿದ್ಯಾರ್ಥಿನಿ ಮೊಬೈಲ್ ಎಗರಿಸಿದ ಆಗಂತುಕರು

    ಉಳ್ಳಾಲ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯಿಂದ ಆಗಂತುಕರಿಬ್ಬರು ಮೊಬೈಲ್ ಕಳವು ನಡೆಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು-ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯ ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಶುಕ್ರವಾರ ತಡರಾತ್ರಿ ವೇಳೆ ನಡೆದಿದೆ.

    ಕುನ್ಸಾಂಗ್ ಲಚಿಕ್ ಅನ್ನುವ ನರ್ಸಿಂಗ್ ವಿದ್ಯಾರ್ಥಿನಿ ಕೈಯಲ್ಲಿದ್ದ ಮೊಬೈಲನ್ನು ಆಗಂತುಕರು ಕಳವು ನಡೆಸಿದ್ದಾರೆ. ಇಲ್ಲಿನ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿನಿಯರಿಬ್ಬರು ಹಾಗೂ ಓರ್ವ ವಿದ್ಯಾರ್ಥಿ ದೇರಳಕಟ್ಟೆಯಲ್ಲಿ ಶಾಪಿಂಗ್ ನಡೆಸಿ ಹಾಸ್ಟೆಲ್ ಕಡೆಗೆ ವಾಪಸ್ಸಾಗುತ್ತಿದ್ದ ಸಂದರ್ಭ ಘಟನೆ ನಡೆದಿದೆ.ಮೂವರು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ದೇರಳಕಟ್ಟೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಸ್ಕೂಟರಿನಲ್ಲಿ ಬಂದ ಇಬ್ಬರು ವಿದ್ಯಾರ್ಥಿನಿಯ ಕೈಯಲ್ಲಿದ್ದ ಮೊಬೈಲನ್ನು ಕೀಳಿ ಪರಾರಿಯಾಗಿದ್ದಾರೆ. ವಿದ್ಯಾರ್ಥಿನಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ನಾಲ್ಕು ವೈದ್ಯಕೀಯ ಕಾಲೇಜುಗಳು ಒಟ್ಟಾಗಿರುವ ದೇರಳಕಟ್ಟೆ ಜಂಕ್ಷನ್ ವಸತಿ, ವಾಣಿಜ್ಯ ಹಾಗೂ ಅಂಗಡಿ ಮುಂಗಟ್ಟುಗಳಿಂದ ತುಂಬಿ ಅಭಿವೃದ್ಧಿ ಹೊಂದಿದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದೆ. ಕ್ಷೇಮ ಆಸ್ಪತ್ರೆಯಿಂದ-ಫಾದರ್ ಮುಲ್ಲರ್ ಆಸ್ಪತ್ರೆಯ ತನಕ ಬೀದಿ ದೀಪಗಳಿವೆ. ಅತ್ತ ದೇರಳಕಟ್ಟೆ ಜಂಕ್ಷನ್ ನಲ್ಲಿ ಮಾತ್ರ ಬೀದಿ ದೀಪಗಳು ಉರಿಯುತ್ತವೆ. ಆದರೆ ಅಯ್ಯಪ್ಪ ದೇವಸ್ಥಾನ, ಬೆಳ್ಮ ಗ್ರಾಮ ಪಂಚಾಯತ್ ಸುತ್ತ, ರಸ್ತೆಬದಿಯಲ್ಲಿ ಬೀದಿ ದೀಪಗಳಿಲ್ಲದೆ ಮೂಲಭೂತ ಸೌಕರ್ಯಗಳಿಂದಲೇ ವಂಚಿತಗೊಂಡಿದೆ.ಇನ್ನು ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುವ ರಸ್ತೆಯಲ್ಲಿ ಬೀದಿ ದೀಪಗಳಿಲ್ಲದೆ ದೌರ್ಜನ್ಯಕ್ಕೆ ಒಳಗಾಗುವ ಅಪಾಯವಿದೆ. ಕೆಲ ವರ್ಷಗಳ ಹಿಂದೆ ಬೆಳ್ಮ ಗ್ರಾಮ ಪಂಚಾಯಿತಿ ಕಟ್ಟಡದ ಎದುರುಭಾಗದ ರಸ್ತೆಬದಿಯಿಂದಲೇ ವೈದ್ಯ ವಿದ್ಯಾರ್ಥಿ-ವಿದ್ಯಾರ್ಥಿನಿಯನ್ನು ಅಪಹರಿಸಿದ ತಂಡ ಸಾಮೂಹಿಕ ಅತ್ಯಾಚಾರವೆಸಗಿತ್ತು. ಪ್ರಕರಣ ರಾಜ್ಯದಾದ್ಯಂತ ಸುದ್ಧಿಯೂ ಆಗಿತ್ತು. ಮತ್ತೊಂದು ಪ್ರಕರಣ ಆಗುವ ಮುನ್ನ ಬೆಳ್ಮ ಗ್ರಾಮ ಪಂಚಾಯಿತಿ ಆಡಳಿತ ಸಮಿತಿ ಹಾಗೂ ಅಭಿವೃದ್ಧಿ ಅಧಿಕಾರಿ ಕೂಡಲೇ ಎಚ್ಚೆತ್ತು ದಾರಿದೀಪ ಹಾಗೂ ಸಿಸಿಟಿವಿಯನ್ನು ಅಳವಡಿಸುವತ್ತ ಗಮನಹರಿಸಬೇಕಿದೆ ಅನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss