ಉಡುಪಿ: ಇಲ್ಲಿನ ಕೃಷ್ಣಪುರ ಮಠ ಸಮೀಪ ಇರುವ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ರೊಚ್ಚಿಗೆದ್ದ ಗ್ರಾಹಕರು ಸೋಮವಾರ ಸಹಕಾರಿ ಬ್ಯಾಂಕ್‌ಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಸಹಕಾರ ಬ್ಯಾಂಕ್ ಮುಖ್ಯಸ್ಥ ಬಿ.ವಿ.ಲಕ್ಷ್ಮೀನಾರಾಯಣ ಎಂಬಾತ ನಾಪತ್ತೆ ಆಗಿದ್ದು, ವಿವಿಧ ಸೊಸೈಟಿ ಮತ್ತು ಗ್ರಾಹಕರಿಂದ 100 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಗ್ರಾಹಕರ ಠೇವಣಿ ಹಣವನ್ನು ಹಲವು ಕಡೆ ಹೂಡಿಕೆ ಮಾಡಿ ಸೊಸೈಟಿ ನಷ್ಟ ಹೊಂದಿದೆ ಎಂದು ಹೇಳಲಾಗಿದೆ. ಜತೆಗೆ ಕಳೆದ ಜೂನ್ ತಿಂಗಳಿಂದ ಗ್ರಾಹಕರಿಗೆ ಯಾವುದೇ ಬಡ್ಡಿ ನೀಡಿಲ್ಲ. ಅಸಲು ಕೇಳಿದರೂ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕಾರಣದಿಂದ ಬೇಸತ್ತ ಗ್ರಾಹಕರು ಬ್ಯಾಂಕ್ ಒಳ ನುಗ್ಗಿ ಪ್ರತಿಭಟಿಸಿದರು.
ಈ ವೇಳೆ ಮಹಿಳಾ ಸಿಬ್ಬಂದಿಯನ್ನು ಗ್ರಾಹಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಹಕರ ಒತ್ತಡದಿಂದ ನೊಂದ ಮಹಿಳಾ ಸಿಬ್ಬಂದಿ ಬ್ಯಾಗ್‌ನಲ್ಲಿದ್ದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಏಳೆಂಟು ಮಾತ್ರೆಗಳನ್ನು ನುಂಗಲು ಯತ್ನಿಸಿದಾಗ ಗ್ರಾಹಕರು ತಪ್ಪಿಸಲು ಯತ್ನಿಸಿದ್ದಾರೆ. ಬಳಿಕ ಸಿಬ್ಬಂದಿಗೆ ಬೈದು ಮಾತ್ರೆಗಳನ್ನು ಹೊರಹಾಕುವಂತೆ ತಾಕೀತು ಮಾಡಿದ್ದಾರೆ. ಸ್ಥಳಕ್ಕೆ ಉಡುಪಿ ನಗರ ಠಾಣೆ ಪೊಲೀಸರು ಆಗಮಿಸಿ ದೂರು ದಾಖಲಿಸಿಕೊಂಡಿದ್ದಾರೆ.
ಸಹಕಾರ ಬ್ಯಾಂಕ್‌ಗಳ ಅವ್ಯವಹಾರ
ಬೆಂಗಳೂರಿನಲ್ಲಿ ಗುರು ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್, ವಶಿಷ್ಠ ಕೋಆಪರೇಟಿವ್ ಬ್ಯಾಂಕ್ ಹಾಗೂ ಸಿರಿ ವೈಭವ ಪತ್ತಿನ ಸಹಕಾರಿ ಬ್ಯಾಂಕ್ ಮತ್ತು ಶುಶೃತಿ ಕೋಆಪರೇಟಿವ್ ಬ್ಯಾಂಕ್, ಯಾದಗಿರಿಯ ಶ್ರೀ ರೇವಣಸಿದ್ದೇಶ್ವರ ವಿವಿಧೋದ್ದೇಶ ಸಹಕಾರ ಸಂಘ ನಿ. ಬ್ಯಾಂಕ್‌ಗಳಲ್ಲಿ ಈಗಾಗಲೇ ವಂಚನೆಯಾಗಿದ್ದು, ಈ ಸಾಲಿಗೆ ಈಗ ಕಮಲಾಕ್ಷಿ ವಿವಿದ್ಧೋದ್ದೇಶ ಸಹಕಾರಿ ಸಂಘವು ಸೇರಿಕೊಂಡಂತಾಗಿದೆ.