ಮಂಗಳೂರು: ಅಪ್ರಾಪ್ತೆ ಅತ್ಯಾಚಾರ ಪ್ರಕರಣದ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿರುವ ಹಿನ್ನಲೆಯಲ್ಲಿ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿ ಆದೇಶಿಸಿದೆ.ನಗರದ ಕಾಟಿಪಳ್ಳದ ಕೃಷ್ಣಾಪುರ ಮಠದ ಬಳಿಯ ಬಾಡಿಗೆ ಮನೆಯ ನಿವಾಸಿ ಹರೀಶ್ ಆಚಾರಿ ಪ್ರಕರಣದಿಂದ ಖುಲಾಸೆಗೊಂಡಾತ. ಹರೀಶ್ ಆಚಾರಿ ತನ್ನ ಪಕ್ಕದ ಬಾಡಿಗೆ ಮನೆಯ ನಿವಾಸಿ ಅಪ್ರಾಪ್ತೆಯೊಂದಿಗೆ ಸಲುಗೆ ಬೆಳೆಸಿದ್ದ. ಬಳಿಕ ಆಕೆಯನ್ನು ಮದುವೆಯಾಗುವೆನೆಂದು ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭವತಿಯನ್ನಾಗಿಸಿದ್ದ. ಆಕೆಯ ತಾಯಿ ನೀಡಿರುವ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಣಂಬೂರು ಠಾಣಾ ಸಹಾಯಕ ಪೊಲೀಸ್ ಆಯುಕ್ತ ಮದನ್ ಎಂ. ಗಾಂವ್ಕರ್ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಫ್ ಟಿ ಎಸ್ ಸಿ 1ರ ನ್ಯಾಯಾಧೀಶೆ ಮಂಜುಳ ಇಟ್ಟಿಯವರು ಹರೀಶ್ ಆಚಾರಿ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಆರೋಪಿಯನ್ನು ದೋಷಮುಕ್ತಗೊಳಿಸಿದೆ. ಆರೋಪಿಯ ಪರವಾಗಿ ವಕೀಲರಾದ ವೇಣುಕುಮಾರ್ ಮತ್ತು ಯುವರಾಜ್ ಕೆ. ಅಮೀನ್ ವಾದಿಸಿದ್ದರು.
