ಬೆಳ್ತಂಗಡಿ: ಮಂಗಳೂರಿನಲ್ಲಿ ಶಂಕಿತ ಉಗ್ರ ಶಾರೀಕ್ ಕೃತ್ಯದ ಹಿಂದಿನ ದಿನ ಬೆಳ್ತಂಗಡಿಯ ಬೆಂದ್ರಾಳದ ಬಾರೆ ಎಂಬಲ್ಲಿಂದ ನಿಷೇಧಿತ ಸ್ಯಾಟಲೈಟ್ ಫೋನ್ ಕರೆ ಹೋಗಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಶನಿವಾರ ಬೆಂದ್ರಾಳ ಪ್ರದೇಶದಲ್ಲಿ ತನಿಖೆ ಶೋಧ ನಡೆಸಿದರು.
ತೋಟತ್ತಾಡಿ ಗ್ರಾಮದ ಬೆಂದ್ರಾಳ ಅರಣ್ಯ ಪ್ರದೇಶದಿಂದ ನ. 18ರಂದು ಸಂಜೆ 5 ಗಂಟೆಗೆ ನಿಷೇಧಿತ ಸಾಟಲೈಟ್ ಫೋನ್ ಕರೆ ಹೋಗಿರುವ ಬಗ್ಗೆ ಕೇಂದ್ರ ಅಧಿಕಾರಿಗಳಿಗೆ ಮಾಹಿತಿ ಲಭಿಸಿದ್ದು ಅದರಂತೆ ಆಂತರಿಕ ಭದ್ರತಾ ಇಲಾಖೆ ಹಾಗೂ ಸ್ಥಳೀಯ ಪೊಲೀಸರಿಗೆ ತನಿಖೆ ಮಾಡುವಂತೆ ಸೂಚಿಸಿದ್ದರು.
ಧರ್ಮಸ್ಥಳ ಪೊಲೀಸರು ಹಾಗೂ ಮಂಗಳೂರು ಆಂತರಿಕ ಭದ್ರತಾ ಇಲಾಖೆಯ ಇನ್‌ಸ್ಪೆಕ್ಟರ್ ಚಿಂದಾನಂದ ಮತ್ತು ತಂಡ ಶುಕ್ರವಾರವೇ ಬೆಂದ್ರಾಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಶನಿವಾರ ಮತ್ತೆ ಮಾಹಿತಿ ಸಂಗ್ರಹಿಸಿ ಬೆಂದ್ರಾಳ ಸುತ್ತಮುತ್ತಲಿನ 5 ಕಿ.ಮೀ. ಅರಣ್ಯದಲ್ಲಿ ಹುಡುಕಾಟ ನಡೆಸಿತು. ಅನಂತರ ಸಾಟಲೈಟ್ ಕರೆ ಹೋದ ಸ್ಥಳವನ್ನು ಪತ್ತೆ ಹಚ್ಚಿದ್ದು ಅಲ್ಲಿ ಪರಿಶೀಲನೆ ನಡೆಸಿತು. ಆದರೆ ಅಲ್ಲಿ ಯಾವುದೇ ಇತರ ಕುರುಹುಗಳು ಪತ್ತೆಯಾಗಿಲ್ಲ.
ಧರ್ಮಸ್ಥಳ ಠಾಣೆಯ ಪಿಎಸ್‌ಐ ಅನಿಲ್ ಕುಮಾರ್ ಡಿ. ನೇತೃತ್ವದಲ್ಲಿ ಸಿಬಂದಿಗಳಾದ ಮಹಮ್ಮದ್ ಅಸ್ಲಾಮ್, ಪ್ರಶಾಂತ್, ರಾಜೇಶ್ ತೆರಳಿದ್ದು, ಸ್ಥಳೀಯರಾದ ಮೋಹನ್ ಗೌಡ, ಉಮೇಶ್ ಬಿ., ಸತೀಶ್ ಬಳ್ಳಿ, ಕಾರ್ತಿಕ್ ಪೊಲೀಸರಿಗೆ ಕಾಡಿನಲ್ಲಿ ದಾರಿತೋರಿಸಲು ಸಹಕರಿಸಿದರು.