Wednesday, October 9, 2024
spot_img
More

    Latest Posts

    ಇಂಗ್ಲೆಂಡ್ ನಲ್ಲಿ ಕಾನೂನು ಪಿ ಹೆಚ್ ಡಿ ಪದವಿ ಪಡೆದ ಮಂಗಳೂರಿನ ಪ್ರೀತಿ ಲೋಲಾಕ್ಷ ನಾಗವೇಣಿ

    ಮಂಗಳೂರು: ಇಂಗ್ಲೆಂಡ್ ನ ಲ್ಯಾಂಕಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಮಂಗಳೂರು ಮೂಲದ ಡಾ. ಪ್ರೀತಿ ಲೋಲಾಕ್ಷ ನಾಗವೇಣಿ ಅವರಿಗೆ ಕಾನೂನಿನಲ್ಲಿ ಪಿ ಹೆಚ್ ಡಿ ಪದವಿ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಯೂ, ಇಂಗ್ಲೆಂಡ್ ನ ಮಾಜಿ ಸಚಿವರೂ, ಸಂಸತ್ ಸದಸ್ಯರೂ ಆಗಿರುವ ಅಲಿಸ್ಟರ್ ಬರ್ಟ್ ಪದವಿ ಪ್ರದಾನ ಮಾಡಿದರು.

    ಕೊಣಾಜೆಯ ವಿಶ್ವಮಂಗಳ ಸ್ಕೂಲ್, ಮಂಗಳೂರಿನ ಸಂತ ಅಲೋಶಿಯಸ್ ಜೂ ಕಾಲೇಜ್ ನ ಹಳೆ ವಿದ್ಯಾರ್ಥಿನಿಯಾಗಿರುವ ಡಾ. ಪ್ರೀತಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಚಿನ್ನದ ಪದಕದೊಂದಿಗೆ ಬಿ ಎ ಎಲ್ ಎಲ್ ಬಿ (ಆನರ್ಸ್) ಪದವಿ ಹಾಗೂ ಇಂಗ್ಲೆಂಡ್ ನ ಯೂನಿವರ್ಸಿಟಿ ಆಫ್ ರೆಡಿಂಗ್ ನಲ್ಲಿ ಎಲ್ ಎಲ್ ಎಂ ಪದವಿ ಪಡೆದಿದ್ದರು.

    ವಿಶ್ವ ಸಂಸ್ಥೆಯಲ್ಲಿ ನಾಲ್ಕು ಬಾರಿ ತಮ್ಮ ವಿಚಾರ ಮಂಡಿಸಿದ್ದ ಡಾ. ಪ್ರೀತಿ ಅವರ ಸಾಕಷ್ಟು ಚಿಂತನೆಗಳನ್ನು ವಿಶ್ವ ಸಂಸ್ಥೆ ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿ ಅವರ ವಿದ್ವತ್ತನ್ನು ಗೌರವಿಸಿತ್ತು. ವಿಶ್ವ ಸಂಸ್ಥೆಯ ತಜ್ಞರ ಸಮಿತಿ ಮಾನವ ಹಕ್ಕುಗಳ ಕುರಿತ ತನ್ನ ವರದಿಯಲ್ಲಿ ಡಾ. ಪ್ರೀತಿ ಅವರ ಚಿಂತನೆಯನ್ನು ಉಲ್ಲೇಖ ಮಾಡಿತ್ತು. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಡಾ. ಪ್ರೀತಿ ಅವರ ಬರಹಗಳನ್ನು ತನ್ನ ಡಾಟಾ ಬೇಸ್ ಗೆ ಸೇರ್ಪಡೆ ಗೊಳಿಸಿತ್ತು. ಈ ಮೂಲಕ ಡಾ. ಪ್ರೀತಿ ವಿಶ್ವದ ವಿದ್ವತ್ ಲೋಕದ ಗಮನ ಸೆಳೆದಿದ್ದರು.

    ಪ್ರಸಕ್ತ ಕಿಂಗ್ಸ್ ಕಾಲೇಜು, ಲಂಡನ್ ಇದರ ಸ್ಟೂಡೆಂಟ್ ಲಾ ರಿವ್ಯೂ ಅಂಡ್ ಫೋರಮ್ ನ ಹಿರಿಯ ಸಂಪಾದಕರು ಆಗಿರುವ ಡಾ. ಪ್ರೀತಿ, ಯೂನಿವರ್ಸಿಟಿ ಆಫ್ ಸೆಂಟ್ರಲ್ ಲಾಂಕಶೈರ್ ನ ಆನರ್ ಅಬ್ಯುಸ್ ರಿಸರ್ಚ್ ಮ್ಯಾಟ್ರಿಸ್ (HARM Network) ನ ಸದಸ್ಯರೂ ಆಗಿದ್ದಾರೆ. ಇಂಗ್ಲೆಂಡ್ ನಲ್ಲಿ ಈಗಾಗಲೇ ಐದು ಅಂತರ್ ರಾಷ್ಟ್ರೀಯ ಕಾನೂನು ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಿ, ನಡೆಸಿರುವ ಡಾ. ಪ್ರೀತಿಗೆ ಇಂಗ್ಲೆಂಡ್ ನ ಲ್ಯಾಂಕಸ್ಟರ್ ಯೂನಿವರ್ಸಿಟಿ ಲ್ಯಾಂಕಸ್ಟರ್ ಅವಾರ್ಡ್ – ಗೋಲ್ಡ್ ನೀಡಿ ಗೌರವಿಸಿದೆ.

    ಅಂತರ್ ರಾಷ್ಟ್ರೀಯ ಅಕಡೆಮಿಕ್ ಜರ್ನಲ್ ಗಳಲ್ಲಿ ಡಾ. ಪ್ರೀತಿ ಅವರ ಇಪ್ಪತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿದ್ದು, ಕೋವಿಡ್ -19 ಮತ್ತು ಅಂತರ್ ರಾಷ್ಟ್ರೀಯ ಆರೋಗ್ಯ ರೆಗುಲೇಷನ್ ಕುರಿತ ಡಾ. ಪ್ರೀತಿ ಅವರ ಬರಹವನ್ನು ಈ ಹಿಂದೆಯೇ ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್, ನ್ಯೂಯಾರ್ಕ್ ಪ್ರಕಟಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss