Saturday, July 27, 2024
spot_img
More

    Latest Posts

    ಕಾರಂತರನ್ನು ನೆನೆಯುವಂತೆ ಮಾಡುತ್ತದೆ ಪ.ರಾ. ಶಾಸ್ತ್ರಿ ಬರಹ : ಸಾಹಿತಿ ಪ.ರಾಮಕೃಷ್ಣಶಾಸ್ತ್ರಿ ಅಭಿನಂದನೆ, ಪುಸ್ತಕ ಬಿಡುಗಡೆ  ಕಾರ್ಯಕ್ರಮದಲ್ಲಿ ಡಾ : ವೀರೇಂದ್ರ ಹೆಗ್ಗಡೆ

    ಬೆಳ್ತಂಗಡಿ : ಕುತೂಹಲ ಪ. ರಾಮಕೃಷ್ಣ ಶಾಸ್ತ್ರಿಗಳ ಬರಹಗಳ ಶಕ್ತಿಯಾಗಿದೆ. ಶಿವರಾಮ ಕಾರಂತರಂತಹ ವಿದ್ವಾಂಸರು ನಮ್ಮ ಮುಂದೆ ಇದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಸುಯೋಗವಾಗಿದೆ. ಕಾರಣ ಅವರಂತೆ ಶಾಸ್ತ್ರಿಗಳಿಗೆ ವಿಷಯಗಳನ್ನು ಆಳವಾಗಿ ಸಂಗ್ರಹಿಸಿ ಸಂಕ್ಷಿಪ್ತ ವಿವರ ಕೊಡುವ ಭಾಷಾ ಪಾಂಡಿತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

    ಇಲ್ಲಿನ ಶ್ರೀ ಮಂಜುನಾಥೇಶ್ವರ ಕಲಾಭವನದಲ್ಲಿ ಶನಿವಾರ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದನ ಸಮಿತಿ ವತಿಯಿಂದ ನಡೆದ 70 ವರ್ಷ ತುಂಬಿದ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರನ್ನು ಅಭಿನಂದಿಸಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

    ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರವಣಿಗೆ ಮೂಲಕ ಬದುಕು ಕಟ್ಟಿಕೊಂಡವರು ಪ.ರಾ.ಶಾಸ್ತ್ರಿಗಳು. ಅವರು ನೆಲದ ಸ್ಪರ್ಶವನ್ನು ಬದುಕಿನುದ್ದಕ್ಕೂ ಇಟ್ಟುಕೊಂಡವರು. ಮಾಹಿತಿಗಳನ್ನು ಬೇರೆ ಬೇರೆ ಆಕರಗಳಿಂದ ಸಂಗ್ರಹಿಸಿ ತನ್ನ ಜ್ಞಾನದಲ್ಲಿರಿಸಿಕೊಂಡು ಲೇಖನವಾಗಿ ಬರೆಯುವುದು ಅವರಿಗೆ ಸಿದ್ಧಿಸಿದೆ ಎಂದರು.

    ಶಾಸಕ ಹರೀಶ್ ಪೂಂಜ ಮಾತನಾಡಿ, ಪ.ರಾ.ಶಾಸ್ತ್ರಿಗಳ ಸಾಹಿತ್ಯ ಬದುಕು ರೂಪಿಸುವಂಥದ್ದು. ಪಠ್ಯಪುಸ್ತಕಗಳಲ್ಲಿ ಅವರ ಬರಹಗಳು ಇನ್ನಷ್ಟು ಬರುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಿದ್ದು ಅವರ ಬರಹಗಳ ಪ್ರೇರಣೆಯಿಂದ ಇನ್ನಷ್ಟು ಮಂದಿ ಹುಟ್ಟಿ ಬರಲಿ ಎಂದರು.

    ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಎನ್. ಅಶೋಕ್ ಭಟ್ ಉಜಿರೆ ಅಭಿನಂದನ
    ಮಾತುಗಳನ್ನಾಡಿದರು. ಪ.ರಾಮಕೃಷ್ಣ ಶಾಸ್ತ್ರಿಗಳು ನೈಜ ಚಿತ್ರಣಗಳಾಗಿವೆ. ಅವರ ಬರಹ ಮತ್ತು ಬದುಕಿನಲ್ಲಿ ತಪಸ್ಸಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ಪ.ರಾಮಕೃಷ್ಣ ಶಾಸ್ತ್ರಿಗಳ ಪತ್ನಿ ಶಾರದಾ ಆರ್.ಶಾಸ್ತ್ರಿ ಇದ್ದರು.

    ಐದು ಪುಸ್ತಗಳ ಬಿಡುಗಡೆ :
    ಶಾಸ್ತ್ರಿಗಳು ಬರೆದ ಮಳೆ ಮಳೆ, ನಟನ ಮನೋಹರಿ, ರೋಚಕ ಲೋಕ, ಪ್ರಪಂಚದ ಸೋಜಿಗಗಳು, ಲಕ್ಷ್ಮೀ ಮಚ್ಚಿನ ಬರೆದ ಸಾಹಿತಿ ಪ.ರಾ.ರಾಮಕೃಷ್ಣ ಶಾಸ್ತ್ರಿ ಬದುಕು ಬರಹ ಬವಣೆ ಕೃತಿಗಳನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.

    ರಾಮಕೃಷ್ಣ ಶಾಸ್ತ್ರಿ ಅಭಿನಂದನ ಸಮಿತಿ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಪ.ರಾಮಕೃಷ್ಣ ಶಾಸ್ತ್ರಿಗಳನ್ನು ಅಭಿನಂದಿಸಲಾಯಿತು. ಸಂಚಾಲಕ ಸಂಪತ್ ಬಿ. ಸುವರ್ಣ ಸ್ವಾಗತಿಸಿದರು. ವಿಭಾ ಕೃಷ್ಣಪ್ರಕಾಶ ಉಳಿತ್ತಾಯ ಸಮ್ಮಾನ ಪತ್ರ ವಾಚಿಸಿದರು. ನ್ಯಾಯವಾದಿ ಧನಂಜಯ್ ರಾವ್ ನಿರೂಪಿಸಿದರು.

    ಇದಕ್ಕೂ ಮೊದಲು ಯಕ್ಷಗಾನ ಭಾಗವತ ಗಾನ ಮತ್ತು ಪ.ರಾಮಕೃಷ್ಣ ಶಾಸ್ತ್ರಿಗಳ ಸಾಹಿತ್ಯ ಅವಲೋಕನ ಕಾರ್ಯಕ್ರಮ ನಡೆಯಿತು.

    ಅಪರೂಪದಲ್ಲೇ ಅಪರೂಪದ ಕಾರ್ಯಕ್ರಮ :

    ಕರ್ನಾಟಕ ಮತ್ತು ಕರಾವಳಿಯು ಕಂಡ ಅಪ್ರತಿಮ ಸಾಹಿತಿ ಪರಾಮಕೃಷ್ಣ ಶಾಸ್ತ್ರಿ ಅವರ ಅಭಿನಂದನ ಸಮಾರಂಭ ಹೃದಯಂಗಮವಾಗಿ ಮೂಡಿಬಂದ ಸಂಭ್ರಮದ ಕ್ಷಣಗಳು.

    ದಾರ್ಶನಿಕ ಸಂತ ರಾಮಕೃಷ್ಣ ಪರಮಹಂಸ ಮತ್ತು ಮಾತೆ ಶಾರದಾದೇವಿ ಲೋಕ ಪೂಜ್ಯರು. ಅನುಕರಣೀಯ ಆದರ್ಶ ಪುರುಷರು. ಅದೇ ಹೆಸರಿನ ದಂಪತಿಗಳಾದ ರಾಮಕೃಷ್ಣ ಶಾಸ್ತ್ರಿ ಮತ್ತು ಶಾರದ ಅಮ್ಮನವರು ಅಕ್ಷರ ಸಂತರು. ಒಂದೇ ಹೆಸರಿನ ಅಸಮಾನ್ಯ ಸಾಧಕ ದಂಪತಿಗಳ ಉದಾಹರಣೆ ಸಿಕ್ಕುವುದು ವಿರಳವಾದರೂ ತಮ್ಮ ಸದ್ಗುಣ ಲಕ್ಷಣಗಳಲ್ಲಿ ಪರಸ್ಪರ ಹೋಲಿಕೆ ಇರುವ ಪರಮಹಂಸ ಮತ್ತು ಶಾಸ್ತ್ರಿ ದಂಪತಿಗಳು ವಿಶಿಷ್ಟವಾಗಿ ಕಂಡುಬರುತ್ತಾರೆ.

    ಸಾಹಿತ್ಯ ಜಾತ್ರೆ ಧಾರ್ಮಿಕವಾಗಿ 70ರ ವಯೋ ಸಂದರ್ಭದಲ್ಲಿ ಶಾಂತಿಯಂತಹ ಹೋಮ ಹವನಾದಿಗಳನ್ನು ಮಾಡಿ ಭಗವಂತನಿಗೆ ಅರ್ಪಿಸಲಾಗುತ್ತದೆ. ಅಕ್ಷರ ಸಂತ ಪ. ರಾಮಕೃಷ್ಣ ಶಾಸ್ತ್ರಿ ಅವರ 70ನೆಯ ಜನುಮ ವಸಂತವನ್ನು ಸಾಹಿತ್ಯ ಜಾತ್ರೆಯಾಗಿ ಆಚರಿಸಿದ್ದು ಸಾಹಿತಿಗೆ ನಿಜವಾಗಿ ಸಲ್ಲುವ ಗೌರವದ ಅಭಿನಂದನೆಯಾಗಿದೆ. ಅಭಿನಂದನೆಯ ಕಾರ್ಯಕ್ರಮ ಸಾಹಿತ್ಯದ ಸಮ್ಮೇಳನದಂತೆ ಕಂಡು ಬಂತು. ಆರಂಭದಲ್ಲಿ ನಡೆದ ಯಕ್ಷಗಾನ ಗಾನಾಮೃತ ಶಾಸ್ತ್ರಿಗಳ ಸಾಂಸ್ಕೃತಿಕ ಆಸಕ್ತಿಯ ವೈಭವವನ್ನು ತೋರಿಸುವಂತಿತ್ತು. ಶಾಸ್ತ್ರಿಗಳ ಸಾಹಿತ್ಯ ಸಂಶೋಧನೆಗೆ ಮತ್ತು ಅಧ್ಯಯನಕ್ಕೆ ಯೋಗ್ಯವಾಗಿದೆ. ಇದನ್ನು ಅವರ ಬರೆಹಗಳ ಕುರಿತು ಸಮಗ್ರ ಚಿಂತನೆಯ ಮೂಲಕ ವಿಸ್ತರಿಸಿದ ತದನಂತರದ ಗೋಷ್ಠಿಗಳ ಕಾರ್ಯಕ್ರಮ ಸಾದರಪಡಿಸಿತು. ಈ ಭಾಗವು ಸಾಹಿತ್ಯ ಸಮ್ಮೇಳನಗಳಲ್ಲಿ ನಡೆಯುವ ಗೋಷ್ಠಿಯನ್ನು ಮೀರಿಸುವಂತಿತ್ತು. ಅಭಿನಂದನೆಯ ಕಾರ್ಯಕ್ರಮ ಪ್ರೇಕ್ಷಕರಿಗೆ ಸಾಹಿತ್ಯದ ರಸದೌತಣವನ್ನು ಉಣಿಸುವಂತೆ ಮಾಡುವಲ್ಲಿ ನಿರೂಪಕರಿಂದ ತೋಡಗಿ ಧನ್ಯವಾದ ಸಮರ್ಪಿಸುವವರ ತನಕದ ಮಾತುಗಳು ಯಶಸ್ವಿಯಾಗಿದ್ದವು. ಶಾಸ್ತ್ರಿಗಳ ಜೀವನವನ್ನು ಪರಮಹಂಸರಿಗೆ ಹೋಲಿಸುವ, ಶಾಸ್ತ್ರಿಗಳ ಬರೆಹವನ್ನು ಕಾರಂತರ ಬರೆಹಗಳಿಗೆ ಸಮೀಕರಿಸುವ, ಶಾಸ್ತ್ರಿಗಳ ಸಾಹಿತ್ಯದ ವ್ಯಾಪ್ತಿಯನ್ನು ಪುರಾಣದಿಂದ ವಿಜ್ಞಾನದ ತನಕ ಇದೆ ಎಂದು ವಿವರಿಸುವಲ್ಲಿ ಸಾರ್ಥಕ ಪ್ರಯತ್ನಗಳು ಸಾಗಿದವು. ಅಕ್ಷರ ಸಂತನೊಳಗೆ ಅದ್ಭುತ ಮಾತಿನ ಕಂತೆ ಇದೆ ಎಂದು ಜನ ಗುರುತಿಸುವಂತಾಯಿತು. ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದ ಸಂದರ್ಭವಿಲ್ಲ. ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದ ಸಂಪ್ರದಾಯವಿಲ್ಲ. ಸಾಹಿತ್ಯಕ್ಕೆ ಹೊಸತೊಂದು ದಾರಿದೀವಿಗೆಯಾದ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿದ ಕಾರ್ಯಕ್ರಮವಿದು.

    ಯಾವುದೇ ಅಪೇಕ್ಷೆಗಳನ್ನು ಹೋಂದಿರದ ಶಾಸ್ತ್ರಿಗಳು ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸಿದಾಗ ಅವರಿಗೆ ಆಗುವ ಸನ್ಮಾನದ ಸಮಾರಂಭವನ್ನು ತನಗೆ ತಾನೇ ಕೊಟ್ಟ ಗೌರವವೆಂಬಂತೆ ಪ್ರೇಕ್ಷಕರು ಸಂಭ್ರಮಿಸಿದ್ದು ಕಣ್ಣಿಗೆ ಆನಂದವನ್ನು ನೀಡುತ್ತಿತ್ತು.

    ಶಾಸ್ತ್ರಿಗಳ ಆತ್ಮೀಯತೆಯ ವ್ಯಾಪ್ತಿ ಕಾರ್ಯಕ್ರಮದಲ್ಲಿದ್ದ ಪ್ರೇಕ್ಷಕರ ಸಂಖ್ಯೆ ಮತ್ತು ಅವರ ಮನೋಭಾವದಿಂದ ಅರಿವಾಗುತ್ತಿತ್ತು. ಈ ಕಾರ್ಯಕ್ರಮಕ್ಕೆ ಬರಲಾಗದ ಹಲವು ಮಂದಿ ‘ಬರಲಾಗಲಿಲ್ಲ” ಎಂಬ ದುಃಖವನ್ನು ಹಂಚಿಕೊಂಡಿದ್ದಾರೆ. ಬಂದ ಅನೇಕರು ಆಮಂತ್ರಣವಿಲ್ಲದಿದ್ದರೂ ಈ ಕಾರ್ಯಕ್ರಮಕ್ಕೆ ಬರಲೇಬೇಕೆಂಬ ಅಪೇಕ್ಷೆಯನ್ನು ಇಟ್ಟುಕೊಂಡಿದ್ದೆವು ಎಂದು ಹೇಳಿಕೊಂಡಿದ್ದಾರೆ. ಇದು ವ್ಯಕ್ತಿಯೊಬ್ಬನ ಸಾಧನೆಯ ಬದುಕಿಗೆ ದೊರೆಯುವ ಮಹಾ ಗೌರವವಾಗಿದೆ. ತನ್ನ ಸಾಧನೆಯಿಂದ ಪ್ರಸಿದ್ಧಿಯ ವ್ಯಾಪ್ತಿ ಎಷ್ಟು ವಿಸ್ತಾರವಾಗಿದೆ ಎನ್ನುವುದಕ್ಕಿಂತ ಎಷ್ಟು ಜನರ ಹೃದಯದಲ್ಲಿ ತನ್ನ ಬಗೆಗಿನ ಪ್ರೀತಿ ಆಳಕ್ಕೆ ಹುದುಗಿದೆ ಎನ್ನುವುದು ಮುಖ್ಯ. ಇದನ್ನು ಶಾಸ್ತ್ರಿಗಳು ಸರ್ವರಿಗೂ ತೋರಿಸಿಕೊಟ್ಟಿದ್ದಾರೆ. ಹತ್ತು ವರ್ಷದ ನಂತರ ಪುನಃ ಇಂತಹ ಇನ್ನೊಂದು ಕಾರ್ಯಕ್ರಮದೊಂದಿಗೆ ಶಾಸ್ತ್ರಿಗಳ ಜೊತೆ ಸಂತೋಷವನ್ನು ಹಂಚಿಕೊಳ್ಳುವ ಯೋಗ ಭಾಗ್ಯ ಎಲ್ಲರಿಗೂ ಒದಗಿ ಬರಲಿ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss