ಹೊಸದಿಲ್ಲಿ: ಹೆಚ್ಚುತ್ತಿರುವ ಸೈಬರ್ ವಂಚನೆ ಮತ್ತು ದೇಶ ವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೇಕಾಬಿಟ್ಟಿ ಸಿಮ್ ಖರೀದಿಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಮುಂದಾಗಿದ್ದು (ಡಿ.1)ನಾಳೆಯಿಂದ ಕಠಿಣ ನಿಯಮಗಳು ಜಾರಿಗೆ ಬರಲಿವೆ.ಹೊಸ ಸಿಮ್ ಖರೀದಿಸಿ ಕಾನೂನು ಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತಿದ್ದ ಡೀಲರ್‌ಗಳಿಗೆ ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಡಿ.1ರಿಂದ ಸಿಮ್ ಮಾರಾಟದ ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಇದರ ಅಡಿಯಲ್ಲಿ, ಸಿಮ್‌ಗಳನ್ನು ಮಾರಾಟ ಮಾಡುವ ಎಲ್ಲ ಡೀಲರ್‌ಗಳು ಪರಿಶೀಲನೆಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಅಷ್ಟೇ ಅಲ್ಲದೆ ಡೀಲರ್‌ಗಳು ಸಿಮ್‌ಗಳನ್ನು ಮಾರಾಟ ಮಾಡಲು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
ದೂರಸಂಪರ್ಕ ಇಲಾಖೆ ರೂಪಿಸಿರುವ ನಿಯಮಗಳನ್ನು ಡಿಸೆಂಬರ್ 1ರಿಂದ ಜಾರಿಗೊಳಿಸಲಾಗುತ್ತಿದೆ. ಸಿಮ್ ಮಾರಾಟಗಾರರು ಮತ್ತು ಖರೀದಿದಾರರು ಇನ್ನು ಮುಂದೆ ಈ ನಿಯಮಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವವರು ಸಮಗ್ರ ಪರಿಶೀಲನೆಗೆ ಒಳಪಡುವ ಅಗತ್ಯವಿದೆ. ಪೊಲೀಸ್ ಪರಿಶೀಲನೆ ಜವಾಬ್ದಾರಿಯನ್ನು ಆಯಾ ಟೆಲಿಕಾಮ್ ಸಂಸ್ಥೆಗಳು ವಹಿಸಿಕೊಳ್ಳಬೇಕಿದೆ. ಅಲ್ಲದೇ, ಸಿಮ್ ಮಾರಾಟ ಮಾಡಿದ ಕ್ಷಣವೇ ನೋಂದಣಿಯನ್ನೂ ಮಾಡಬೇಕಿದ್ದು ಈ ನಿಯಮ ಪಾಲನೆಯಲ್ಲಿ ವಿಫಲರಾದರೆ 10 ಲಕ್ಷ ರೂ. ದಂಡ ಪಾವತಿಸಬೇಕಾಗುತ್ತದೆ.
ಸಿಮ್‌ಕಾರ್ಡ್ ನಿಷ್ಕ್ರಿಯಗೊಂಡ ತಕ್ಷಣ ಅದೇ ನಂಬರ್ ಅನ್ನು ಬೇರೆ ಯಾರಿಗೋ ಹಂಚಿಕೆ ಮಾಡುವಂತಿಲ್ಲ. ಸಿಮ್ ನಿಷ್ಕ್ರಿಯಗೊಂಡ 90 ದಿನಗಳ ಒಳಗೆ ಅದೇ ವ್ಯಕ್ತಿ ಬೇಕಿದ್ದರೆ ನವೀಕರಣ ಮಾಡಿಕೊಳ್ಳುವ ಅವಕಾಶವಿದೆ. ಅವಧಿ ಮೀರಿದ ಬಳಿಕ ಬೇಕಿದ್ದರೆ ಮತ್ತದೇ ಸಂಖ್ಯೆಯ ಹಂಚಿಕೆಗೆ ಅವಕಾಶವಿದೆ.
ನಿಯಮ ಉಲ್ಲಂಘನೆ ಮಾಡಿದರೆ 10 ಲಕ್ಷ ರೂ. ದಂಡ. ಗಂಭೀರ ಪ್ರಕರಣವಾದಲ್ಲಿ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಈ ನಿಯಮದ ಪ್ರಕಾರ ವ್ಯಾಪಾರಸ್ಥರು ಹಾಗೂ ಕಂಪನಿಗಳಿಗೆ ಮಾತ್ರ ಸಿಮ್ ಕಾರ್ಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ. ಸಾಮಾನ್ಯ ಬಳಕೆದಾರರು ಒಂದು ಗುರುತಿನಿಂದ ಗರಿಷ್ಠ 9 ಸಿಮ್‌ಗಳನ್ನು ಮಾತ್ರ ಪಡೆಯಲು ಅವಕಾಶವಿದೆ.
©2021 Tulunada Surya | Developed by CuriousLabs