ಮಂಗಳೂರು: ಗಡಿ ಭಾಗದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಮಂಗಲ್ಪಾಡಿಯ ಪಚ್ಚಂಪಾರೆ ಬಳಿ ತನ್ನ ಒಂದೂವರೆ ತಿಂಗಳ ನವಜಾತ ಹೆಣ್ಣು ಶಿಶುವನ್ನು ಗದ್ದೆಯಲ್ಲಿ ಮಲಗಿಸಿ ನೀರಲ್ಲಿ ಮುಳುಗಿಸಿ ಹತ್ಯೆಗೈದ ತಾಯಿಯನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪೊಲೀಸರ ತನಿಖೆಯಲ್ಲಿ ಈಕೆ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸದೆ ಪರಸ್ಪರ ವಿರುದ್ಧ ಹೇಳಿಕೆಯನ್ನು ನೀಡಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಲ್ಪಾಡಿಯ ಪಚ್ಚಂಪಾರೆ ಕಾಲನಿಯ ಸುಮಂಗಲಿ ಮತ್ತು ಸತ್ಯನಾರಾಯಣ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು ಆರೋಪಿ ಮಹಿಳೆಯ ತಾಯಿ ಒಂದು ತಿಂಗಳ ಹಿಂದೆ ಮೃತ ಪಟ್ಟಿದ್ದು ತಾಯಿಯ ಸಹೋದರಿಯ ಮನೆಯಲ್ಲಿ ವಾಸವಾಗಿದ್ದರು.ಮಂಗಳವಾರ ಮಧ್ಯಾಹ್ನ ತನ್ನ ಮಗುವನ್ನು ಎತ್ತಿಕೊಂಡು ಹೋಗುವ ದೃಶ್ಯವನ್ನು ಮನೆಪಕ್ಕದ ಸಿಸಿ ಟಿವಿಯಲ್ಲಿ ನೋಡಿ ಸ್ಥಳೀಯರು ಹುಡುಕಾಟ ನಡೆಸುತ್ತಿರುವಾಗ ಮುಳಿಂಜ ಬಯಲಿನ ನೀರು ತುಂಬಿದ್ದ ಕೆರೆಗೆ ಹಾರಲು ಮಹಿಳೆ ಸಿದ್ಧವಾಗಿರುವಾಗ ಸಾರ್ವಜನಿಕರು ಈಕೆಯನ್ನು ಹಿಡಿದು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿದರು. ಬಳಿಕ ಪೊಲೀಸರ ತನಿಖೆಯಲ್ಲಿ ಮಗುವನ್ನು ಗದ್ದೆಯ ಕೆಸರು ನೀರಿನಲ್ಲಿ ಮುಳುಗಿಸಿ ಹತ್ಯೆಗೈದಿರುವುದಾಗಿ ತಿಳಿದು ಬಂದಿದೆ.ಮಗುವಿನ ಮರಣೋತ್ತರದ ಪರೀಕ್ಷೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.
©2021 Tulunada Surya | Developed by CuriousLabs