ಮಂಗಳೂರು: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕದ್ರವ್ಯ ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ ಮಂಗಳೂರು ನಗರದ ಕಾಲೇಜೊಂದರ ಪದವಿ ವಿದ್ಯಾರ್ಥಿ ಸಿಸಿಬಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಬಿಜೈ, ಅನಂತ ಕೃಪಾ ಅಪಾರ್ಟ್ಮೆಂಟ್ ನಿವಾಸಿ ಲುಕುಮಾನುಲ್ ಹಕೀಂ(22)ಬಂಧಿತ ಆರೋಪಿ. ಲುಕುಮಾನುಲ್ ಹಕೀಂ ಮಂಗಳೂರಿನ ಬೆಂದೂರ್ ವೆಲ್ ಪರಿಸರದಲ್ಲಿ ಎಂಡಿಎಂಎಯನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈತನ ವಶದಿಂದ ಒಟ್ಟು 25 ಗ್ರಾಂ ತೂಕದ 1,25,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಈತನಿಂದ ಒಂದು ಮೊಬೈಲ್ ಫೋನ್, ಡಿಜಿಟಲ್ ತೂಕಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1,60,000 ರೂ. ಆಗಬಹುದು. ಆರೋಪಿಯ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈತನು ಮಂಗಳೂರು ನಗರದ ಕಾಲೇಜುವೊಂದರ ಪದವಿ ವಿದ್ಯಾರ್ಥಿಯಾಗಿರುತ್ತಾನೆ. ಈ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
©2021 Tulunada Surya | Developed by CuriousLabs