ಮಂಗಳೂರು ನಗರದ ಮುಸ್ಲಿಂ ದಂಪತಿ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಂಗಳೂರಿನಿಂದ ಕಾರ್ಗಿಲ್ ಗೆ ಬೈಕ್ ಮೂಲಕ ಪ್ರಯಾಣಕ್ಕೆ ಮುಂದಾಗಿದ್ದಾರೆ. ಜೀವರಕ್ಷಕ ಕಲೆಯ ಕೋಚ್ ಹಾಗೂ ಪ್ರೇರಣಾತ್ಮಕ ಭಾಷಣಕಾರರಾಗಿ ಗುರುತಿಸಿಕೊಂಡಿರುವ ಸೈಫ್ ಸುಲ್ತಾನ್ ಮತ್ತು ಅದೀಲಾ ಪರ್ಹೀನ್ ಅವರೇ ಈ ದಂಪತಿ. ತಮ್ಮ ಬಿಎಂಡಬ್ಲು ಜಿಎಸ್ 310 ಬೈಕ್ ಮೂಲಕ ದಂಪತಿ ಪ್ರಯಾಣ ಬೆಳೆಸಲಿದ್ದಾರೆ.
ಇವರು ಸುಮಾರು 4000 ಕಿ.ಮೀ.ಗಳ 19 ದಿನಗಳ ತಮ್ಮ ಬೈಕ್ ಪಯಣದ ವೇಳೆ ದೇಶಪ್ರೇಮದ ಸಂದೇಶವನ್ನು ಸಾರುವ ಜತೆಗೆ, ಹಿಜಾಬ್ ಬಗೆಗಿನ ತಪ್ಪು ತಿಳುವಳಿಕೆಯನ್ನು ನಿವಾರಿಸುವ ಹಾಗೂ ರಕ್ತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
ಈ ಕುರಿತು ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸೈಫ್ ಸುಲ್ತಾನ್, ಮಂಗಳೂರಿನ ಲಯನ್ಸ್ ಕ್ಲಬ್ ನಲ್ಲಿ ಜುಲೈ 28ರಂದು ತಮ್ಮ ಕಾರ್ಗಿಲ್ ಪ್ರಯಾಣದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಅವರು ನಾವು ಸಂಚಾರ ಮಾಡಲಿರುವ ಬೈಕ್ ಅನಾವರಣಗೊಳಿಸಲಿದ್ದಾರೆ. ಬೈಕ್ ದಿನಕ್ಕೆ ಸುಮಾರು 300 ರಿಂದ 400 ಕಿ. ಮೀ. ಪ್ರಯಾಣಕ್ಕೆ ಯೋಗ್ಯ ವಾಗುವ ರೀತಿಯಲ್ಲಿ ಮಾರ್ಪಡಿಸಲಾಗಿದೆ ಎಂದರು.
ಹೊನ್ನಾವರ, ಬೆಳಗಾವಿ, ಪುಣೆ, ಮುಂಬೈ, ಸೂರತ್, ಅಹ್ಮದಾಬಾದ್, ಉದಯಪುರ, ಜೈಪುರ, ದಿಲ್ಲಿ, ಅಮೃತಸರ, ಜಮ್ಮು ಮತ್ತು ಶ್ರೀನಗರ ಮೂಲಕ ಸಾಗಿ ಆಗಸ್ಟ್ 15ರಂದು ಕಾರ್ಗಿಲ್ ತಲುಪಲಿದ್ದೇವೆ ಎಂದು ಸೈಫ್ ಸುಲ್ತಾನ್ ಹೇಳಿದರು.