ಮಂಗಳೂರು: ನಗರದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1254 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮೊದಲ ಪ್ರಕರಣದಲ್ಲಿ ಅಕ್ಟೋಬರ್ 9 ರಂದು ಎರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಅಬುಧಾಬಿಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಬಂದಿಳಿದಿದ್ದಾನೆ. ಈತನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಈತ ಪೇಸ್ಟ್ ನೊಳಗೆ ಚಿನ್ನವನ್ನು ಮರೆಮಾಚಿ ನಾಲ್ಕು ಅಂಡಾಕಾರ ರೂಪಕ್ಕೆ ಪರಿವರ್ತಿಸಿ ಅದನ್ನು ಗುದನಾಳದಲ್ಲಿ ಬಚ್ಚಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈತನಿಂದ 1053 ಗ್ರಾಂ ತೂಕದ 61.6 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಎರಡನೇ ಪ್ರಕರಣದಲ್ಲಿ ಅಕ್ಟೋಬರ್ 9 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಕನೊಬ್ಬ ಪ್ರಯಾಣಿಸುತ್ತಿದ್ದ. ಈತ ಬ್ಯಾಗ್‌ನಲ್ಲಿ ಹೊದಿಕೆಯೊಳಗೆ ಇರಿಸಲಾದ ಡಬಲ್ ಲೇಯರ್ಡ್ ಬಟ್ಟೆಯಲ್ಲಿ ಮರೆಮಾಡಿದ 201 ಗ್ರಾಂ ಚಿನ್ನವನ್ನು ಪೇಸ್ಟ್ ನೊಳಗೆ ಮರೆಮಾಡಿ ಸಾಗಾಟ ಮಾಡುತ್ತಿದ್ದ. ತಕ್ಷಣ ಸೊತ್ತು ಸಹಿತ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.
©2021 Tulunada Surya | Developed by CuriousLabs