ಮಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರದಲ್ಲಿ ಭವ್ಯ ಶ್ರೀರಾಮನ ಮೂರ್ತಿಯನ್ನು ರಚಿಸಲು ಕಾರ್ಕಳದಿಂದ ಕೃಷ್ಣ ಶಿಲೆಯನ್ನು ಒಯ್ಯಲಾಗಿದ್ದು, ಮೂರು ದಿನಗಳ ನಿರಂತರ ಸಂಚಾರದ ಬಳಿಕ ಕರಿಕಲ್ಲ ಶಿಲೆ ಅಯೋಧ್ಯೆ ತಲುಪಿದೆ. ಆರು ಟನ್ ತೂಕದ ಶಿಲೆಯನ್ನು ಅಯೋಧ್ಯೆಯಲ್ಲಿ ಮಾಜಿ ಸಚಿವ, ಉದ್ಯಮಿ ನಾಗರಾಜ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ಸ್ವಾಗತಿಸಲಾಯಿತು.
ಉದ್ಯಮಿ ನಾಗರಾಜ ಶೆಟ್ಟಿ ಮಾಲಕತ್ವದ ಗಣೇಶ್ ಶಿಪ್ಪಿಂಗ್ ಏಜನ್ಸಿಯ ಬೃಹತ್ ಲಾರಿಯಲ್ಲಿ 6ರಿಂದ 8 ಟನ್ ತೂಕದ ಬೃಹತ್ ಶಿಲೆ ಕಲ್ಲನ್ನು ಕಾರ್ಕಳದಿಂದ ಒಯ್ಯಲಾಗಿತ್ತು. ಇದಕ್ಕಾಗಿ ನಾಗರಾಜ ಶೆಟ್ಟಿ ತಮ್ಮ ಕಂಪನಿಯ ಇಬ್ಬರು ಚಾಲಕರು ಮತ್ತು ಹೊಸ ಲಾರಿಯನ್ನು ಉಚಿತವಾಗಿ ಕಳಿಸಿಕೊಟ್ಟಿದ್ದರು. ಕಾರ್ಕಳದಿಂದ ಸುಮಾರು 2280 ಕಿಮೀ ದೂರಕ್ಕೆ ಸಂಚರಿಸಿ, ಲಾರಿ ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆ ತಲುಪಿದ್ದು ಸ್ವತಃ ನಾಗರಾಜ ಶೆಟ್ಟಿ ಅವರೇ ಸ್ವಾಗತಿಸಿದ್ದಾರೆ.

ಈ ಹಿಂದೆ, ನೇಪಾಳ, ರಾಜಸ್ಥಾನದಿಂದ ರಾಮನ ಮೂರ್ತಿ ಕೆತ್ತಲು ವಿವಿಧ ರೀತಿಯ ಶಿಲೆ ಕಲ್ಲುಗಳನ್ನು ಅಯೋಧ್ಯೆಗೆ ತರಲಾಗಿತ್ತು. ಆದರೆ ಅವುಗಳ ಗುಣಮಟ್ಟ ಒಳ್ಳೆದಿಲ್ಲ ಎಂದು ಎಲ್ ಅಂಡ್ ಟಿ ಕಂಪನಿಯ ಇಂಜಿನಿಯರುಗಳು ಮತ್ತು ಗಣಿ ಭೂವಿಜ್ಞಾನ ಇಲಾಖೆಯ ತಜ್ಞರು ವರದಿ ನೀಡಿದ್ದರಿಂದ ಉತ್ತಮ ಗುಣಮಟ್ಟದ ಶಿಲೆಗಾಗಿ ಹುಡುಕಾಟ ನಡೆದಿತ್ತು. ಕಾರ್ಕಳದ ಕಪ್ಪು ಶಿಲೆ ಅತ್ಯಂತ ಬಾಳಿಕೆಯುಳ್ಳದ್ದು ಮತ್ತು ಕರಾವಳಿಯಲ್ಲಿ ನಾಗನ ಕಲ್ಲುಗಳನ್ನು ಅದರಿಂದಲೇ ಮಾಡುತ್ತಾರಲ್ಲದೆ, ನೂರಾರು ವರ್ಷ ಅಭಿಷೇಕ ಮಾಡಿದರೂ ಕರಗದೆ ಉಳಿಯುತ್ತದೆ ಎಂಬ ನೆಲೆಯಲ್ಲಿ ರಾಮನ ಮೂರ್ತಿ ನಿರ್ಮಾಣಕ್ಕೆ ಅದೇ ಕಲ್ಲನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಈ ಹಿಂದೆ ಕೊರೊನಾ ಸಂದರ್ಭದಲ್ಲಿ ವಿದೇಶದಿಂದ ಆಮ್ಲಜನಕದ ಟ್ಯಾಂಕರ್ ಗಳು ಮಂಗಳೂರಿನ ಬಂದರು ಮತ್ತು ವಿಮಾನ ನಿಲ್ದಾಣಕ್ಕೆ ಬಂದಿದ್ದಾಗಲೂ, ಇಡೀ ರಾಜ್ಯಕ್ಕೆ ನಾಗರಾಜ ಶೆಟ್ಟಿ ಅವರೇ ತಮ್ಮ ಕಂಪನಿಯ ಲಾರಿಗಳ ಮೂಲಕ ಅವನ್ನು ಉಚಿತವಾಗಿ ಸಾಗಾಟ ಮಾಡಿಸಿದ್ದರು. ಕರಾವಳಿಯಲ್ಲಿ 200ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಧ್ವಜಸ್ತಂಭ, ರಥಗಳ ನಿರ್ಮಾಣ ಆದಾಗಲೂ ಅವನ್ನು ಗಣೇಶ್ ಶಿಪ್ಪಿಂಗ್ ಏಜನ್ಸಿಯ ಲಾರಿಗಳ ಮೂಲಕ ಉಚಿತವಾಗಿ ಸಾಗಿಸುತ್ತಿದ್ದರು. ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲು ಶ್ರೀರಾಮ, ಹನುಮಂತನ ಬೃಹತ್ ರಥವನ್ನು ಕುಂದಾಪುರದ ಕೋಟೇಶ್ವರದಲ್ಲಿ ನಿರ್ಮಿಸಲಾಗುತ್ತಿದ್ದು, ಅದನ್ನು ಕೂಡ ರಾಮನ ಜನ್ಮಸ್ಥಾನಕ್ಕೆ ತಲುಪಿಸುವ ಹೊಣೆ ಹೊತ್ತುಕೊಂಡಿದ್ದೇನೆ. ಅದೊಂದು ಪುಣ್ಯದ ಕಾರ್ಯ, ಈ ಸೇವೆಯನ್ನು ಮಾಡುವ ಭಾಗ್ಯವನ್ನು ಪಡೆದಿದ್ದೇ ಧನ್ಯ ಎಂದು ನಾಗರಾಜ ಶೆಟ್ಟಿ ಹೇಳಿದ್ದಾರೆ.
