Monday, April 15, 2024
spot_img
More

  Latest Posts

  ಮಂಗಳೂರು: ದಸರಾ ಶೋಭಾಯಾತ್ರೆಯಲ್ಲಿ ಪ್ರಪ್ರಥಮ ಬಾರಿಗೆ ತುಳುನಾಡಿನ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ಧ ಚಿತ್ರ

  ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾ 2023ರ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಉಸ್ತುವಾರಿ ಸಮಿತಿ (ರಿ) ಮಂಗಳೂರು ಸಹಯೋಗದೊಂದಿಗೆ ಆ.24 ಮಂಗಳವಾರ ದಂದು ಸಂಜೆ 4 ರಿಂದ ಜರಗುವ ದಸರಾ ಶೋಭಾಯಾತ್ರೆಯಲ್ಲಿ ಪ್ರಪ್ರಥಮ ಬಾರಿಗೆ ತುಳುನಾಡಿನ ಕೆಚ್ಚೆದೆಯ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ಧ ಚಿತ್ರ ಮೆರುಗು ನೀಡಲಿದೆ ಎಂದು ತು.ರ.ವೇ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ತಿಳಿಸಿದರು.


  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1837 ರ ತುಳುನಾಡ ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರ ಬಿಂದುವಾಗಿ ನೇತೃತ್ವ ವಹಿಸಿದ ಮಹಾದಂಡನಾಯಕ ತುಳುನಾಡಿನ ವೀರ, ಸಮರ ಸೇನಾನಿ ಕೆದಂಬಾಡಿ ರಾಮಯ್ಯ ಗೌಡರು ಇತಿಹಾಸದ ಪುಟಗಳಲ್ಲಿ ಚಿರಸ್ಮರಣೀಯರು. ಬ್ರಿಟಿಷರು ವಿಧಿಸಿದ ಅಸಮರ್ಪಕ ತೆರಿಗೆ ನೀತಿ, ತಂಬಾಕು ಮತ್ತು ಉಪ್ಪಿನ ಕುರಿತ ನಿಯಮಗಳ ಪಾವತಿಯ ಬಗ್ಗೆ ತುಳುನಾಡಿನ ರೈತರಲ್ಲಿ ಆಕ್ರೋಶ, ಅಸಹನೆ ರೂಪುಗೊಂಡಿದ್ದ ಆ ಸಂದರ್ಭದಲ್ಲಿ ಮೂಲತಃ ಸುಳ್ಯದ ಜಮೀನ್ದಾರರಾದ ಕೆದಂಬಾಡಿ ರಾಮಯ್ಯ ಗೌಡರು ಉಬರಡ್ಕದ ಮಿತ್ತೂರಿನ ತಮ್ಮ ಗದ್ದೆಯಲ್ಲಿ ಮಗನ ಮದುವೆ ಎಂಬ ನೆಪದಲ್ಲಿ ಬ್ರಿಟಿಷರ ವಿರುದ್ಧ ಆಕ್ರೋಶ ಭರಿತರಾಗಿದ್ದ ರೈತ ಮುಖಂಡರನ್ನು ಹಾಗೂ ರೈತ ಸೈನಿಕರನ್ನು ಒಟ್ಟು ಗೂಡಿಸಿ, ಖಡ್ಗ, ಆನೆ, ಕುದುರೆ, ಮದ್ದು ಗುಂಡುಗಳನ್ನು ಜೋಡಿಸಿ ಕ್ರಾಂತಿಕಾರಿ ಹೋರಾಟಕ್ಕೆ ಅಣಿಯಾಗಿ, 2000 ಕ್ಕೂ ಅಧಿಕ ಸದೃಢ ಸೈನ್ಯದೊಂದಿಗೆ ಬ್ರಿಟಿಷರ ಬೆಳ್ಳಾರೆಯ ಖಜಾನೆಯನ್ನು ಧ್ವಂಸಗೊಳಿಸಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹತ್ತಿಸಿದರು. ಖಜಾನೆ ಸ್ವಾಧೀನದ ಬಳಿಕ ಹಂತ ಹಂತವಾಗಿ ಸ್ಥಳೀಯ ಅರಸರು ಹಾಗೂ ರೈತ ಮುಖಂಡರ ನೆರವಿನೊಂದಿಗೆ ಪುತ್ತೂರು, ಕಾಸರಗೋಡು, ಪಾಣೆ ಮಂಗಳೂರು ಪ್ರದೇಶಗಳನ್ನು ಗೆದ್ದು ಕೊನೆಯದಾಗಿ ೧೮೩೭ ರ ಎಪ್ರಿಲ್ ೫ ರಂದು ಆಗಿದ್ದಆಡಳಿತದ ಪ್ರಮುಖ ಕೇಂದ್ರವಾಗಿದ್ದ ಮಂಗಳೂರಿನ ಬಾವುಟಗುಡ್ಡೆ ಪ್ರದೇಶವನ್ನು ಸ್ವಾಧೀನ ಪಡಿಸಿ ಬ್ರಿಟಿಷ್ ಧ್ವಜವನ್ನು ಕಿತ್ತೆಸೆದು ತುಳುನಾಡಿನ ಸೂರ್ಯ ಚಂದ್ರರು ಇರುವ ಬಾವುಟ ಹಾರಿಸಿದರು. ಬಾವುಟ ಹಾರಿಸಿದ ಈ ಪ್ರದೇಶವು ಬಾವುಟ ಗುಡ್ಡೆಯೆಂದು ಖ್ಯಾತಿ ಪಡೆದಿದ್ದು, ಬ್ರಿಟಿಷರನ್ನು ಸಂಪೂರ್ಣವಾಗಿ ಮಟ್ಟ ಹಾಕಿದ ರೈತರ ಸೈನ್ಯ ನಂತರ ಕೆದಂಬಾಡಿ ರಾಮಯ್ಯ ಗೌಡರ ನಾಯಕತ್ವದಲ್ಲಿ ಯಶಸ್ವಿ ಸ್ಥಾಪಿತ ಸರಕಾರವನ್ನು ಮಂಗಳೂರಿನಲ್ಲಿ ಸ್ಥಾಪಿಸಿ 13 ದಿನಗಳ ಕಾಲ ಸರಕಾರವನ್ನು ನಡೆಸಿದರು ಎಂದು ಬ್ರಿಟಿಷ್ ದಾಖಲೆಗಳಲ್ಲಿ ಉಲ್ಲೇಖವಾಗಿದೆ. 13 ದಿನಗಳ ನಂತರ ಕಲ್ಲಿಕೋಟೆ, ಬೆಂಗಳೂರಿನಿಂದ ಬಂದ ಬ್ರಿಟಿಷರ ಸೈನ್ಯ ಮತ್ತೆ ಮಂಗಳೂರನ್ನು ವಶಪಡಿಸಿಕೊಂಡು ಹೋರಾಟಗಾರರ ಬದುಕನ್ನು ಕ್ರೂರವಾಗಿ ಅಂತ್ಯಗೊಳಿಸಿತ್ತು. ಅಮರ ಸುಳ್ಯ ಕ್ರಾಂತಿ ಎಂದು ಬಿಂಬಿತವಾದ 1837ರ ತುಳುನಾಡ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರೆದುರು ಹೋರಾಡಿ ಹುತಾತ್ಮರಾದ ಸ್ವಾತಂತ್ರ್ಯ ಸೇನಾನಿಯಾದ ಕೆದಂಬಾಡಿ ರಾಮಯ್ಯಗೌಡ ಹಾಗೂ ಮತ್ತಿತರನ್ನು ನೆನಪಿಸುವ ಸಲುವಾಗಿ ತುಳುನಾಡ ರಕ್ಷಣಾ ವೇದಿಕೆಯು ಸತತವಾಗಿ ಕಳೆದ 12 ವರ್ಷಗಳಿಂದ ಎಪ್ರಿಲ್ ೫5 ರಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಧ್ವಜಾರೋಹಣ, ಹಾಗೂ ತುಳುನಾಡಿನ ವಿವಿಧ ಭಾಗಗಳಲ್ಲಿ ವಿಚಾರ ಸಂಕಿರಣ ಸಹಿತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. 1837 ರ ಅಮರ ಕ್ರಾಂತಿಯ ರೂವಾರಿ ತುಳುನಾಡ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರಿಗೆ ಗೌರವ ಸಲ್ಲಿಸುವ ಸಲುವಾಗಿ ಹಾಗೂ ನೆನಪು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಲು ಹಾಗೂ ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಲು ಪ್ರಪ್ರಥಮ ಬಾರಿಗೆ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡರ ಸ್ತಬ್ಧ ಚಿತ್ರದ ಟ್ಯಾಬ್ಲೊವನ್ನು ಈ ಬಾರಿಯ ಮಂಗಳೂರು ದಸರಾ – 2023ರ ಶೋಭಾಯಾತ್ರೆಯಲ್ಲಿ ಪ್ರಸ್ತುತ ಪಡಿಸಲಿದೆ ಎಂದು ಅವರು ತಿಳಿಸಿದರು.

  ಬಳಿಕ ಮಾತನಾಡಿದ ಕಿರಣ್ ಗುಡ್ಲೆ ಗುತ್ತು ರವರು ಸ್ವಾತಂತ್ರ್ಯ ಹೋರಾಟದ ತಂದೆ ಹಾಗೂ ಮಗ ಇಬ್ಬರೂ ಪ್ರಾಣ ಕಳೆದುಕೊಂಡ ಇತಿಹಾಸವಿಲ್ಲ. ಆದರೆ ತುಳುನಾಡ ಸ್ವಾತಂತ್ರ್ಯ ಹೋರಾಟದಲ್ಲಿ ಕೆದಂಬಾಡಿ ರಾಮಯ್ಯ ಗೌಡರು ಮತ್ತು ಅವರ ಮಗ ಇಬ್ಬರೂ ದೇಶಕ್ಕಾಗಿ ಪ್ರಾಣ ತೆತ್ತರು ಎಂದು ರಾಮಯ್ಯ ಗೌಡರ ತ್ಯಾಗ ಸ್ಮರಿಸಿದರು.

  ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಉಸ್ತುವಾರಿ ಸಮಿತಿ (ರಿ) ಮಂಗಳೂರು, ಪದಾಧಿಕಾರಿಗಳಾದ ಕಿರಣ್ ಬುಡ್ಲೆಗುತ್ತು – ಅಧ್ಯಕ್ಷರು ರಕ್ಷಿತ್ ಪುತ್ತಿಲ – ಕಾರ್ಯದರ್ಶಿ ಶಿವರಾಮ ಗೌಡ ನಿನ್ನಿಕಲ್ಲು, ತುಳುನಾಡ ರಕ್ಷಣಾ ವೇದಿಕೆ (ರಿ), ಪದಾಧಿಕಾರಿಗಳಾದ ಕೋಶಾಧಿಕಾರಿ ಪ್ರಶಾಂತ್ ಭಟ್ ಕಡಬ – ಕೇಂದ್ರಿಯ ಸಂಘಟನಾ ಕಾರ್ಯದರ್ಶಿ ಶರಣ್ ರಾಜ್ ಕೆ.ಆರ್. – ಅಧ್ಯಕ್ಷರು, ಮಂಗಳೂರು ನಗರ ಗೈಟನ್ ರೊಡ್ರಿಗಸ್ – ಜೊತೆ ಕಾರ್ಯದರ್ಶಿ ಯುವ ಘಟಕ ಉಪಸ್ಥಿತರಿದ್ದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss