ಮಂಗಳೂರು: ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಗದ್ದಲ ಉಂಟಾಗಿ, ಸರ್ಕಾರ ಧ್ವನಿವರ್ಧಕ ಬಳಕೆಗೆ ಮಾರ್ಗಸೂಚಿ ಹೊರಡಿಸಿತ್ತು. ಇದೀಗ ಈ ಆದೇಶವನ್ನು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳಗಳಿಗೂ ಅನ್ವಯಿಸಲು ಹೊರಟಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ರಾತ್ರಿಯಿಂದ ಬೆಳಗ್ಗಿನವರೆಗೆ ನಡೆಯುತ್ತಿದ್ದ ಯಕ್ಷಗಾನ ದೇವರ ಸೇವೆಯನ್ನು ರಾತ್ರಿ 10ರ ಒಳಗೆ ಮುಗಿಸಬೇಕೆನ್ನುವ ಆಡಳಿತ ಮಂಡಳಿಯ ನಿರ್ಧಾರಕ್ಕೆ ದೇವಿ ಭಕ್ತರಿಂದ ವಿರೋಧ ವ್ಯಕ್ತವಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 6 ಯಕ್ಷಗಾನ ಮೇಳಗಳಿಂದ ಯಕ್ಷಗಾನ ಪ್ರದರ್ಶನ ನಡೆಯುತ್ತದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಗೆ 2 ಶತಮಾನಗಳ ಇತಿಹಾಸವಿದೆ.
ಕಷ್ಟ ಕಾರ್ಪಣ್ಯಗಳ ನಿವಾರಿಸಿದ ಸಲುವಾಗಿ ದೇವಿಗೆ ಹರಕೆಯಾಗಿ ಭಕ್ತರು ಈ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಳ್ಳುತ್ತಾರೆ. ರಾತ್ರಿ ಆರಂಭವಾಗುವ ಯಕ್ಷಗಾನ ಸೇವೆ ಬೆಳಗ್ಗಿನವರೆಗೂ ನಡೆಯುತಿತ್ತು. ಆದರೆ ಅಜಾನ್ ವಿವಾದ ಶುರುವಾದ ಬಳಿಕ ಸರ್ಕಾರ ರಾತ್ರಿ 10:30ರ ನಂತರ 50 ಡೆಸಿಬಲ್‌ಗಿಂತ ಹೆಚ್ಚಿನ ಧ್ವನಿವರ್ಧಕ ಬಳಸದಂತೆ ಆದೇಶ ಹೊರಡಿಸಿತ್ತು. ಈ ಆದೇಶದನ್ವಯ ರಾತ್ರಿಯಿಡಿ ನಡೆಯುತ್ತಿದ್ದ ಯಕ್ಷಗಾನವನ್ನೂ ಸಂಜೆ 5 ಗಂಟೆಗೆ ಆರಂಭಿಸಿ ರಾತ್ರಿ 10ರ ಒಳಗೆ ಮುಗಿಸುವುದಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.
ದೇವಿಯ ಮುಂದೆ ಕಾಲಮಿತಿ ಯಕ್ಷಗಾನ ನಡೆಸುವ ಬಗ್ಗೆ ಹೂ ಪ್ರಶ್ನೆ ಇಟ್ಟಾಗ ದೇವಿಯು ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದೆ ಎಂದು ಕ್ಷೇತ್ರದ ಪ್ರಧಾನ ಅರ್ಚಕ ಹರಿನಾರಾಯಣ ಅಸ್ರಣ್ಣ ಸ್ಪಷ್ಟಪಡಿಸಿದ್ದಾರೆ.
ಆಡಳಿತ ಮಂಡಳಿಯ ಈ ನಿರ್ಧಾರವನ್ನು ಕಟೀಲು ಯಕ್ಷಸೇವಾ ಸಮನ್ವಯ ಸಮಿತಿ ಸೇರಿದಂತೆ ಯಕ್ಷಗಾನ ಸೇವೆ ನಡೆಸುವ ಕೆಲ ಭಕ್ತರು ಖಂಡಿಸಿದ್ದಾರೆ. ಕಟೀಲು ತಾಯಿ ರಾತ್ರಿಯ ಪೂಜೆಯ ನಂತರ ಕಟೀಲು ಮೇಳದ ಯಕ್ಷಗಾನ ವೀಕ್ಷಿಸಲು ತೆರಳುತ್ತಾಳೆ ಎಂಬುದು ಸಾರ್ವತ್ರಿಕ ನಂಬಿಕೆ. ಹೀಗಾಗಿ ಕಾಲಮಿತಿ ಯಕ್ಷಗಾನ ನಿರ್ಧಾರದಿಂದ ಮೂಲ ಆಶಯ ಸೊರಗಿ ಜನರ ಧಾರ್ಮಿಕ ನಂಬಿಕೆಗೆ ಘಾಸಿಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
