ಕಾಪು ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನನ್ನು ಬೀಚ್ ನಿರ್ವಹಣ ಸಮಿತಿಯ ಲೈಫ್ ಗಾರ್ಡ್‌ಗಳು ರಕ್ಷಿಸಿದ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕೋಟೆಪುರಂನ ಕಾಲೇ ಜೊಂದರ ಸುಮಾರು 20-25 ಮಂದಿ ವಿದ್ಯಾರ್ಥಿಗಳ ತಂಡ ಕರಾವಳಿ ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದು, ಶನಿವಾರ ಬೆಳಗ್ಗೆ ಕಾಪು ಬೀಚ್‌ಗೆ ಬಂದಿದ್ದರು. ಬೀಚ್‌ನಲ್ಲಿ ಸಮುದ್ರ ಸ್ನಾನಕ್ಕೆಂದು ಇಳಿದಿದ್ದ ವಿದ್ಯಾರ್ಥಿಗಳ ಪೈಕಿ ಬಾಬು (20) ಸಮುದ್ರದ ಅಲೆಯ ಸುಳಿಗೆ ಸಿಲುಕಿ ಸಮುದ್ರ ಪಾಲಾಗುವ ಭೀತಿ ಎದುರಾಗಿತ್ತು ಎನ್ನಲಾಗಿದೆ.
ತಮ್ಮ ತಂಡದ ಸದಸ್ಯ ಸಮುದ್ರದಲ್ಲಿ ಮುಳುಗೇಳುತ್ತಿದ್ದಂತೆಯೇ ಜತೆಗಾರರು ಬೊಬ್ಬೆ ಹಾಕಿದ್ದು, ಬೊಬ್ಬೆಯನ್ನು ಕೇಳಿ ಸ್ಥಳೀಯರು ಮತ್ತು ಬೀಚ್ ನಿರ್ವಹಣ ಸಮಿತಿಯ ಲೈಫ್ ಗಾರ್ಡ್‌ಗಳು ಸ್ಥಳಕ್ಕೆ ಧಾವಿಸಿದ್ದರು.
ಲೈಫ್ ಗಾರ್ಡ್‌ಗಳಾದ ಚಂದ್ರಶೇಖರ್, ದಾದಾಪೀರ್, ಸಂದೇಶ್ ಮತ್ತು ಸ್ಥಳೀಯರಾದ ಗೌರವ್ ಅವರು ಟ್ಯೂಬ್ ಮೂಲಕ ಯುವಕನ ಬಳಿಗೆ ತೆರಳಿ ಅಲೆಗೆ ಸಿಲುಕಿದ್ದ ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ.
ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಯುವಕ ಚೇತರಿಸಿಕೊಂಡ ಬಳಿಕ ವಿದ್ಯಾರ್ಥಿಗಳು ನಿರ್ಗಮಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.