ಕಡಬ : ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಇಬ್ಬರನ್ನು ಬಲಿ ಪಡೆದಿದೆ ಎಂಬ ಕಾರಣಕ್ಕೆ ಕಡಬ ತಾಲೂಕಿನ ಕೊಂಬಾರು ಸಮೀಪ ಸೆರೆ ಹಿಡಿಯಲಾಗಿದ್ದ ಕಾಡಾನೆಯೊಂದು ಇದೀಗ ಕೊಡಗಿನ ಮತ್ತಿಗೋಡು ಆನೆ ಶಿಬಿರದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದೆ. ಇಬ್ಬರನ್ನು ಬಲಿ ಪಡೆದಿದೆ ಎನ್ನುವ ಕಾರಣದಿಂದಾಗಿ ಕಡಬದಲ್ಲಿ ಸೆರೆ ಹಿಡಿಯಲಾಗಿದ್ದ ಕಾಡಾನೆಯನ್ನು ಕೊಡಗಿನ ಮತ್ತಿಗೋಡು ಆನೆ ಶಿಬಿರಕ್ಕೆ ಸೇರಿಸಲಾಗಿತ್ತು. ಆದರೆ ಅ.11ರ ಶುಕ್ರವಾರ ಈ ಆನೆ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲಾ ಎಂಬಲ್ಲಿ ಕಳೆದ ಫೆಬ್ರವರಿ 20ರಂದು ಬೆಳ್ಳಂಬೆಳಗ್ಗೆ ರಂಜಿತಾ (24) ಹಾಗೂ ರಮೇಶ್ ರೈ (58) ಎಂಬವರು ಕಾಡಾನೆ ದಾಳಿಗೆ ಮೃತಪಟ್ಟಿದ್ದರು. ಈ ಘಟನೆಯಿಂದ ಆಕ್ರೋಶಗೊಂಡಿದ್ದ ಸಾರ್ವಜನಿಕರು ಕಾಡಾನೆ ಸೆರೆ ಹಿಡಿದು ಸ್ಥಳಾಂತರಿಸುವಂತೆ ಒತ್ತಾಯಿಸಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಮರುದಿನವೇ ದುಬಾರೆ ಆನೆ ಶಿಬಿರದಿಂದ ಐದು ಸಾಕಾನೆಗಳನ್ನು ತರಿಸಿ ಕಾರ್ಯಾಚರಣೆ ಆರಂಭಿಸಿ, ಮೂರನೇ ದಿನದಂದು ಕಡಬ ತಾಲೂಕಿನ ಕೊಂಬಾರು ಸಮೀಪದ ಮಂಡೆಕರ ಎಂಬಲ್ಲಿ ಕಾಡಾನೆಯೊಂದನ್ನು ಸೆರೆಹಿಡಿಯಲಾಗಿತ್ತು. ಈ ಆನೆಯನ್ನು ಕೊಡಗಿನ ಆನೆ ಶಿಬಿರಕ್ಕೆ ಕೊಂಡೊಯ್ಯಲಾಗಿತ್ತು. ಆದರೆ ಇದೀಗ ಇಲ್ಲಿಂದ ಸೆರೆಹಿಡಿದ ಕಾಡಾನೆ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
©2021 Tulunada Surya | Developed by CuriousLabs