ಮಂಗಳೂರು;ಪ್ರಕರಣವೊಂದಕ್ಕೆ ಸಂಬಂಧಿಸಿ ನಿಜವಾದ ಆರೋಪಿಯನ್ನು ಬಂಧಿಸದೆ ಅದೇ ಹೆಸರಿನ ಇನ್ನೊಬ್ಬನನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ ಪೊಲೀಸ್ ಅಧಿಕಾರಿಗಳಿಬ್ಬರು ಸಂತ್ರಸ್ತರಿಗೆ ತಮ್ಮ ಜೇಬಿನಿಂದಲೇ 5 ಲಕ್ಷ ರೂ.ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿದೆ. ಮಂಗಳೂರು ಎರಡನೇ ಹೆಚ್ಚುವರಿ ಎಫ್‌ಟಿಎಸ್‌ಸಿ ಪೊಕ್ಸೋ ನ್ಯಾಯಾಲಯ ಈ ಮಹತ್ವದ ಆದೇಶವನ್ನು ನೀಡಿದೆ. ಮಂಗಳೂರು ಮಹಿಳಾ ಪೊಲೀಸ್ ಠಾಣಾ ನಿರೀಕ್ಷಕಿ ರೇವತಿ ಮತ್ತು ಉಪನಿರೀಕ್ಷಕಿ ರೋಸಮ್ಮ ಅವರಿಗೆ ದಂಡ ವಿಧಿಸಲಾಗಿದೆ.
ಪೊಕ್ಸೊ ಪ್ರಕರಣದಡಿ ನವೀನ್ ಎನ್ನುವ ವ್ಯಕ್ತಿ ಆರೋಪಿಯಾಗಿದ್ದ.ಸಂತ್ರಸ್ತ ಬಾಲಕಿ ನೀಡಿದ ಹೇಳಿಕೆಯನ್ವಯ ಎಸ್ಸೈ ರೋಸಮ್ಮ ಅವರು ನವೀನ್ ಮೇಲೆ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಪೊಲೀಸ್ ನಿರೀಕ್ಷಕಿ ರೇವತಿಯವರಿಗೆ ಪ್ರಕರಣ ಹಸ್ತಾಂತರಿಸಿದ್ದರು. ಇವರು ನವೀನ್ ಸಿಕ್ವೇರ ಎಂಬವರನ್ನು ಬಂಧಿಸಿದ್ದರು. ಅವರನ್ನೇ ಆರೋಪಿಯನ್ನಾಗಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಇದನ್ನು ಗಮನಿಸಿದ ನ್ಯಾಯಾಲಯ ಸಂತ್ರಸ್ತ ನವೀನ್ ಸಿಕ್ವೇರ ಎಂಬವರಿಗೆ 5 ಲಕ್ಷ ಪರಿಹಾರ ನೀಡಲು ಸೂಚಿಸಿದೆ.
ಜೊತೆಗೆ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ಆದೇಶಿಸಿದ್ದಾರೆ.