ಬೆಂಗಳೂರು: ಮಗುವಿಗೆ ಜನ್ಮ ನೀಡುವುದಕ್ಕೂ ಮುನ್ನವೇ ದತ್ತು ಸ್ವೀಕಾರಕ್ಕಾಗಿ ಅನ್ಯಧರ್ಮೀಯ ಇಬ್ಬರು ದಂಪತಿಗಳು ಮಾಡಿಕೊಂಡಿದ್ದ ಒಪ್ಪಂದದ ಕುರಿತು ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ಇದು ಹಣಕ್ಕಾಗಿ ಮಗುವನ್ನು ದತ್ತು ಪಡಿಯುವ ಪ್ರಕರಣವಾಗಿದ್ದು, ಈ ರೀತಿಯ ಒಪ್ಪಂದಗಳಿಗೆ ಕಾನೂನಿಯಲ್ಲಿ ಅವಕಾಶವಿಲ್ಲ ಎಂದು ತಿಳಿಸಿದೆ.
ಮುಸ್ಲಿಂ ದಂಪತಿಗಳಿಂದ ಹಿಂದೂ ಮಗುವಿನ ದತ್ತು ವಿಚಾರಕ್ಕೆ ಸಂಬಂಧಿಸಿದಂತೆ ಗರ್ಭದಲ್ಲಿನ ಮಗುವಿನ ದತ್ತು ಒಪ್ಪಂದವನ್ನು ಹೈಕೋರ್ಟ್ ರದ್ದು ಪಡಿಸಿದೆ. ಮಹಮದೀಯ ಕಾನೂನಿನಲ್ಲಿಯೂ ದತ್ತು ಸ್ವೀಕಾರ ಕಾನೂನು ಬಾಹಿರವಾಗಿದೆ. ಬಡತನದ ಕಾರಣಕ್ಕೆ ಮಗುವಿನ ದತ್ತು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ.
ಮಗು ಸಾಕಲಾಗದಿದ್ದರೆ ಮಕ್ಕಳ ಕಲ್ಯಾಣ ಸಮಿತಿಗೆ ನೀಡಬಹುದಿತ್ತು. ಸರ್ಕಾರಿ ಶಾಲೆಯಲ್ಲಿ ಓದಿಸಬಹುದಿತ್ತು. ಸರ್ಕಾರದ ಹಲವು ಯೋಜನೆಗಳ ಲಾಭ ಪಡೆಯಬಹುದಿತ್ತು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಮಾರು ಎರಡು ವರ್ಷ ಮತ್ತು ಒಂಬತ್ತು ತಿಂಗಳ ಹೆಣ್ಣು ಮಗುವಿನ ಮಗುವಿನ ಪೋಷಣೆಯ ಹಕ್ಕು ನೀಡುವಂತೆ ಕೋರಿ ದತ್ತು ಪಡೆದ ಪೋಷಕರು (ಮುಸ್ಲಿಂ ಧರ್ಮಿಯರು) ಮತ್ತು ಮಗುವಿನ ತಂದೆ ತಾಯಿ(ಹಿಂದೂ ಧರ್ಮಿಯರು) ಜಂಟಿಯಾಗಿ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಉಡುಪಿ ಜಿಲ್ಲಾ ನ್ಯಾಯಾಲಯದ ವಜಾಗೊಳಿಸಿ ಆದೇಶಿಸಿತ್ತು.
ಇದನ್ನು ಇಬ್ಬರೂ ಪೋಷಕರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಹೇಮಲೇಖ ಅವರನ್ನೊಳಗೊಂಡ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಅಲ್ಲದೆ, ಮೊಹಮ್ಮದೀಯ ಕಾನೂನಿನ ತತ್ವಗಳ ಅಡಿಯಲ್ಲಿಯೂ ಸಹ ಈ ರೀತಿಯ ಒಪ್ಪಂದಕ್ಕೆ ಅವಕಾಶವಿಲ್ಲ. ಹಿಂದೂ ಸಮುದಾಯಕ್ಕೆ ಸೇರಿದವರು ಮಗುವನ್ನು ಮುಸ್ಲಿಂ ಸಮುದಾಯದ ದಂಪತಿಗೆ ದತ್ತು ನೀಡುವುದಕ್ಕೆ ಅಂಗೀಕಾರಾರ್ಹವಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಜೊತೆಗೆ, ಮಗುವನ್ನು ಅಕ್ರಮವಾಗಿ ಹಣಕ್ಕಾಗಿ ಹಸ್ತಾಂತರ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ದತ್ತು ನೀಡಿರುವ ಮತ್ತು ದತ್ತು ಸ್ವೀಕರಿಸಿರುವ ಆರೋಪಿಗಳ (ಅರ್ಜಿದಾರರು) ವಿರುದ್ಧ ಉಡುಪಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ (ಡಿಸಿಪಿಯು) ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015ರ ಪ್ರಕಾರ ಪಾಲಕರು ಆರ್ಥಿಕವಾಗಿ ಸದೃಢರಾಗಿರದಿದ್ದರೆ ಮಗುವಿನ ಪೋಷಣೆಗೆ ಸಾಕಷ್ಟು ಅವಕಾಶಗಳಿವೆ. ಅಲ್ಲದೆ, ನಿಜವಾದ ತಂದೆ ಹಾಗೂ ತಾಯಿ ಮಗುವನ್ನು ಹಿಂಪಡೆಯಲು ಇಚ್ಛಿಸಿದಲ್ಲಿ ಅಂತಹ ಮನವಿಯನ್ನು ಪರಿಗಣಿಸಿ ಕಾನೂನಿನ ಪ್ರಕಾರ ಮಕ್ಕಳ ಕಲ್ಯಾಣ ಸಮಿತಿ ಕ್ರಮ ಕೈಗೊಳ್ಳಬಹುದಾಗಿದೆ.
ಜೊತೆಗೆ, ಮಗುವನ್ನು ಬೇರೆಯವರಿಗೆ ಮಾರಾಟ ಮಾಡದಂತೆ ನೋಡಿಕೊಳ್ಳಲು ಅಧಿಕಾರಿಗಳು ದಂಪತಿಯ ಚಟುವಟಿಕೆಗಳನ್ನು ಪರಿಶೀಲಿಸುತ್ತಿರಬೇಕು ಎಂದು ನ್ಯಾಯಪೀಠ ತಿಳಿಸಿದೆ. ಮಗುವಿನ ಪೋಷಕರು ಬಡತನದಿಂದ ಮಗುವನ್ನು ಪೋಷಣೆ ಮಾಡುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ 2020ರ ಮಾರ್ಚ್ 21 ಎಂದು ದತ್ತು ಸ್ವೀಕಾರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದಾದ ಕೆಲ ದಿನಗಳ ಬಳಿಕ 2020ರ ಮಾರ್ಚ್ 26 ರಂದು ಮಗು ಜನಿಸಿತ್ತು. ಈ ಸಂಬಂಧ ಉಡುಪಿ ಜಿಲ್ಲೆಯ ಡಿಸಿಪಿಯು 2021 ರಲ್ಲಿ ದೂರು ದಾಖಲಿಸಿಕೊಂಡಿತ್ತು. ಅಲ್ಲದೇ, ಮಗುವನ್ನು ವಶಕ್ಕೆ ಪಡೆದು ಮಕ್ಕಳ ಆರೈಕೆ ಘಟಕಕ್ಕೆ ನೀಡಲಾಗಿತ್ತು.