ಮಂಗಳೂರು: ಮಂಗಳೂರಿನ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ತಾನು ಕರ್ತವ್ಯದಲ್ಲಿದ್ದ ವೇಳೆ ಸ್ವತಃ ಮುಂದೆ ನಿಂತು ಅನಾಮಧೇಯ ಮೃತದೇಹವೊಂದನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಹೆಡ್ ಕಾನ್ ಸ್ಟೇಬಲ್ ಸಂಪತ್ ಬಂಗೇರ ಅವರಿಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದ್ದಾರೆ. ಸಂಪತ್ ಬಂಗೇರ ಬುಧವಾರ ಕರ್ತವ್ಯದಲ್ಲಿದ್ದ ಸಮಯ ನಗರದ ಮಿನಿ ವಿಧಾನದ ಸೌಧದ ಎದುರು ಅಪರಿಚಿತ ವ್ಯಕ್ತಿಯ ಮೃತದೇಹವನ್ನು ಗಮನಿಸಿದ್ದಾರೆ. ಈ ಸಂದರ್ಭ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಬರುವುದನ್ನೂ ಕಾಯದೆ, ಸಹದ್ಯೋಗಿಗಳ ನೆರವಿನೊಂದಿಗೆ ತಾನೇ ಮುಂದೆ ನಿಂತು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಕಚೇರಿಯಲ್ಲಿ ಡಿಸಿಪಿ ಅಂಶು ಕುಮಾರ್ ಉಪಸ್ಥಿತಿಯಲ್ಲಿ ಸಂಪತ್ ಬಂಗೇರರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ನಿಮ್ಮ ಕಾರ್ಯತತ್ಪರತೆ ಮತ್ತು ಕರ್ತವ್ಯ ಪ್ರಜ್ಞೆ ಇತರರಿಗೆ ಮಾದರಿಯಾಗಲಿ ಎಂದು ಅಭಿನಂದಿಸಿದ್ದಾರೆ.
ಈ ಹಿಂದೆಯೂ ಕೋವಿಡ್ ನಿರ್ಬಂಧವನ್ನು ಪಾಲಿಸಲು ಒಪ್ಪದ ಹಿರಿಯರೊಬ್ಬರನ್ನು ತಾಳ್ಮೆಗೆಡದೇ ಮನವೊಲಿಸುವ ಪ್ರಯತ್ನ ಮಾಡಿದ್ದ ಸಂಪತ್ ಬಂಗೇರ ನಮಗೆಲ್ಲ ಹೆಮ್ಮೆ ಎನಿಸಿದ್ದರು. ಇವರ ಈ ಸೇವೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆಗೆ ವ್ಯಕ್ತವಾಗಿದೆ.
