Saturday, October 5, 2024
spot_img
More

    Latest Posts

    ಮಂಗಳೂರು: ಡಾ.ಎಂ.ಎನ್.ರಾಜೇಂದ್ರ ಕುಮಾರ್‌ಗೆ ಪ್ರೆಸ್‌ಕ್ಲಬ್ ಗೌರವ ಅತಿಥಿ ಪುರಸ್ಕಾರ

    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ಆಧುನಿಕ ತಂತ್ರಜ್ಞಾನಗಳನ್ನು ಸಹಕಾರಿ ಕ್ಷೇತ್ರದಲ್ಲಿ ಅಳವಡಿಸಿಕೊಂಡು ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಿರುವ ಕಾರಣ ಅತ್ಯುತ್ತಮ ಪ್ರಗತಿ ಸಾಧಿಸಿದೆ. ಪ್ರಸ್ತುತ ಬ್ಯಾಂಕ್ 111 ಶಾಖೆಗಳನ್ನು ಹೊಂದಿದ್ದು, ಮುಂದಿನ ಎರಡು ವರ್ಷಗಳಲ್ಲಿ ಶಾಖೆಗಳ ಸಂಖ್ಯೆಯನ್ನು 125ಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

    ನಗರದ ಪತ್ರಿಕಾ ಭವನದಲ್ಲಿ ಶನಿವಾರ ಮಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ಪ್ರೆಸ್‌ಕ್ಲಬ್ ಗೌರವ ಅತಿಥಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು ಸಾಧನೆಯ ಹಿಂದೆ ಜಿಲ್ಲೆಯ ಎಲ್ಲ ಸಹಕಾರಿಗಳ ನೆರವಿದೆ. ಹಾಗಾಗಿ ಇದು ಸಹಕಾರ ಕ್ಷೇತ್ರಕ್ಕೆ ಸಂದ ಗೌರವ ಎಂದರು. ರಾಜ್ಯದಲ್ಲೇ ಅತಿ ಹೆಚ್ಚು ಶಾಖೆ ಹಾಗೂ ಅತಿ ಹೆಚ್ಚು ಠೇವಣಿ ಹೊಂದಿರುವ ಬ್ಯಾಂಕ್ ಎನ್ನುವ ಹೆಗ್ಗಳಿಕೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಪಡೆದಿದೆ ಎಂದರು. ಬದಲಾವಣೆಗೆ ತಕ್ಕಂತೆ ಸೇವೆ ನೀಡುವುದು ಸಹಕಾರಿ ಕ್ಷೇತ್ರದಲ್ಲಿ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಸ್‌ಸಿಡಿಸಿ ಬ್ಯಾಂಕ್ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಬೆಂಗ್ರೆ ಹಾಗೂ ಮಾಣಿಯಲ್ಲಿ ಹೊಸ ಶಾಖೆ ಶೀಘ್ರ ಆರಂಭವಾಗಲಿದೆ. ಎಸ್‌ಸಿಡಿಸಿಸಿ ಬ್ಯಾಂಕ್‌ನ 9 ಎಟಿಎಂಗಳು ಕಾರ್ಯ ನಿರ್ವಹಿಸುತ್ತಿದ್ದು, ಬೆಳ್ತಂಗಡಿ, ಪುತ್ತೂರು ಹಾಗೂ ಗೋಳಿಯಂಗಡಿಯಲ್ಲಿ ಶೀಘ್ರ ಹೊಸ ಎಟಿಎಂಗಳನ್ನು ತೆರೆಯಲಾಗುವುದು ಎಂದು ಅವರು ತಿಳಿಸಿದರು. ಸರ್ಕಾರಕ್ಕೆ ಮನವಿ: ಬ್ಯಾಂಕಿಂಗ್ ಕ್ಷೇತ್ರದ ತವರೂರಾದ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವೂ ಬಲಿಷ್ಠವಾಗಿದೆ. ಉಭಯ ಜಿಲ್ಲೆಗಳ ಎಲ್ಲ 170 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಲಾಭದಲ್ಲಿವೆ. ದೇಶದಲ್ಲಿ ಈಗ ಗ್ರಾಮ ಪಂಚಾಯತ್‌ಗೊಂದು ಪತ್ತಿನ ಬ್ಯಾಂಕ್ ತೆರೆಯುವುದು ಕಾರ್ಯ ಕ್ಷೇತ್ರವನ್ನು ವಿಭಜಿಸಲು ಕಾರಣವಾಗುತ್ತದೆ ಎನ್ನುವ ಆತಂಕವಿದೆ. ಆ ಕಾರಣ ಕರಾವಳಿ ಜಿಲ್ಲೆಗಳಲ್ಲಿ ಹಿಂದಿನ ಸ್ಥಿತಿಯಲ್ಲಿಯೇ ಸಹಕಾರಿ ಬ್ಯಾಂಕ್ ವ್ಯವಸ್ಥೆಯನ್ನು ಮುಂದುವರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು. ಹಿರಿಯ ಪತ್ರಕರ್ತ ಕೆ. ಆನಂದ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಇದೇ ಹಿರಿಯ ಸ್ವಾತಂತ್ರೃ ಹೋರಾಟಗಾರ ಮಟ್ಟಾರು ವಿಠಲ ಕಿಣಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ , ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ಆರ್., ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್. ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಆರ್.ಸಿ. ಭಟ್ ಕಾರ್ಯಕ್ರಮ ನಿರೂಪಿಸಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss