ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೊಳಪಟ್ಟ ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಿ ಒಂದೂವರೆ ತಿಂಗಳ ಬಳಿಕ ನೇಮಕಗೊಂಡ ಅತಿಥಿ ಉಪನ್ಯಾಸಕರು ಇದೀಗ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸಿ ಮೊದಲ ಸೆಮಿಸ್ಟರ್‌ನ ಬೋಧನಾ ಕಾರ್ಯವನ್ನು ಮುಗಿಸಬೇಕಾದ ಒತ್ತಡಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತಕ್ಷಣವೇ ಈ ಬಗ್ಗೆ ಗಮನಹರಿಸಿ ಉಪನ್ಯಾಸಕರ ಹೆಚ್ಚುವರಿ ಕಾರ್ಯಕ್ಕೆ ಹೆಚ್ಚುವರಿ ಸಂಭಾವನೆ ಪಾವತಿಸುವಂತೆ ಮಂಗಳೂರು ವಿಶ್ವವಿದ್ಯಾನಿಲಯ ಮಾಜಿ ಸಿಂಡಿಕೇಟ್ ಸದಸ್ಯ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಎಸ್.ಆರ್. ಹರೀಶ್ ಆಚಾರ್ಯ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಶೈಕ್ಷಣಿಕ ಚಟುವಟಿಕೆ ಗಳು ಆಗಸ್ಟ್ 23ರಿಂದ ಪ್ರಾರಂಭವಾಗಿದ್ದರೂ ಸರಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ತಡವಾಗಿ ನಡೆದು ಅಕ್ಟೋಬರ್ 7 ರಿಂದ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ಇದೀಗ ಅವರು ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸಿ ಡಿಸೆಂಬರ್ 15ರ ಒಳಗೆ ಬೋಧನಾ ಕಾರ್ಯವನ್ನು ಮುಗಿಸುವಂತೆ ಅವರ ಮೇಲೆ ಒತ್ತಡ ಹೇರಲಾಗಿದೆ. ಆದ ಕಾರಣ ಸರಕಾರ ಮಧ್ಯಪ್ರವೇಶಿಸಿ ಅತಿಥಿ ಉಪನ್ಯಾಸಕರಿಗೆ ಹೆಚ್ಚುವರಿ ಕಾರ್ಯಕ್ಕೆ ಹೆಚ್ಚುವರಿ ಸಂಭಾವನೆ ನೀಡುವಂತೆ ಆಗ್ರಹಿಸಿದರು.
ರಾಜ್ಯದಲ್ಲಿರುವ ವಿವಿಧ ಸರಕಾರಿ ಕಾಲೇಜುಗಳಲ್ಲಿ 9,000 ಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಬೋಧನಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಪೈಕಿ ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಗಳಲ್ಲಿ 600 ಮಂದಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಅದರ ಘಟಕ ಕಾಲೇಜುಗಳಲ್ಲಿ 480ಕ್ಕೂ ಅಧಿಕ ಅತಿಥಿ ಉಪನ್ಯಾಸಕರಿದ್ದಾರೆ. ಎಂದು ಮಾಹಿತಿ ನೀಡಿದರು.
ವೇತನ ಬಿಡುಗಡೆಗೆ ಆಗ್ರಹ: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಅದರ ಘಟಕ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸು ತ್ತಿರುವ ಅತಿಥಿ ಉಪನ್ಯಾಸಕರ ವೇತನವನ್ನು ಕಳೆದ ಮೂರು ತಿಂಗಳುಗಳಿಂದ ವಿವಿಯು ಪಾವತಿಸದೇ ಬಾಕಿ ಉಳಿಸಿ ಕೊಂಡಿದೆ. ಉಪನ್ಯಾಸಕರ ವೇತನ ಮಾತ್ರವಲ್ಲದೇ ಹೆಚ್ಚಿನ ವಿಭಾಗಗಳ ಪರೀಕ್ಷಾ ಮೌಲ್ಯಮಾಪನ ಕಾರ್ಯವನ್ನು ನಿರ್ವಹಿಸಿದ ಉಪನ್ಯಾಸಕರಿಗೆ ಸಂಭಾವನೆಯನ್ನು ಇನ್ನೂ ನೀಡಿಲ್ಲ. ಕೊರೋನ ಕಾಲದಲ್ಲಿ ಕರ್ತವ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರಿಗೆ ಮೂರು ವರ್ಷ ಕಳೆದರೂ ಮೂರು ತಿಂಗಳ ಸಂಭಾವನೆ ಪಾವತಿಸಿಲ್ಲ. ಉಪನ್ಯಾಸಕರಿಗೆ ವೇತನ ಪಾವತಿಗೆ ವಿಶ್ವವಿದ್ಯಾನಿಲಯದಲ್ಲಿ ಹಣಕಾಸು ಕೊರತೆ ಇದೆ ಎಂಬ ಕಾರಣ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ವಿಶ್ವವಿದ್ಯಾನಿಲಯವು ಅತಿಥಿ ಉಪನ್ಯಾಸಕರ ಸಂಭಾವನೆ ಪಾವತಿಯ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಒಂದು ವೇಳೆ ವಿವಿ ಸಂಭಾವನೆ ಪಾವತಿಸಲು ಅಸಮರ್ಥವಾದರೆ ರಾಜ್ಯ ಸರಕಾರ ಮಧ್ಯೆ ಪ್ರವೇಶ ಮಾಡಿ ಪಾವತಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಬೇಕೆಂದು ಸರಕಾರವನ್ನು ಆಗ್ರಹಿಸಿದರು. ಪದವಿಪೂರ್ವ ಕಾಲೇಜುಗಳಲ್ಲಿ ಶೋಷಣೆ: ರಾಜ್ಯದಲ್ಲಿ ಒಟ್ಟು 1890 ಪದವಿ ಪೂರ್ವ ಕಾಲೇಜುಗಳು ಇವೆ. ಇವುಗಳಲ್ಲಿ 679 ಸರಕಾರಿ ಪದವಿ ಪೂರ್ವ ಕಾಲೇಜುಗಳಿವೆ. ಈ ಪದವಿ ಪೂರ್ವ ಕಾಲೇಜುಗಳಲ್ಲಿ ಅಂದಾಜು ಸುಮಾರು 8,000 ದಷ್ಟು ಉಪನ್ಯಾಸಕರಿದ್ದು ಅವರುಗಳಲ್ಲಿ ಶೇಕಡಾ 40 ರಷ್ಟು ಅಂದರೆ ಸುಮಾರು 3200 ದಷ್ಟು ಅತಿಥಿ ಉಪನ್ಯಾಸಕರು ಇದ್ದಾರೆ. ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಸರಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿ ಮತ್ತು ಅವರನ್ನು ರಾಜ್ಯ ಸರಕಾರವು ಬಳಸಿಕೊಂಡಿರುವುದು ಒಂದೇ ರೀತಿಯದ್ದಾಗಿದೆ. ರಾಜ್ಯ ಸರಕಾರವು ಸರಕಾರಿ ವ್ಯವಸ್ಥೆಯಲ್ಲಿ ತಾನೇ ರೂಪಿಸಿರುವ ನಿಯಮಾವಳಿಗಳ ವಿರುದ್ಧವಾಗಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಸರಕಾರದ ಈ ನಡೆಯು ಖಂಡನೀಯ ಎಂದು ಅಭಿಪ್ರಾಯಪಟ್ಟರು.
2005 ರಿಂದ ನಿರಂತರವಾಗಿ ಸರಕಾರವು ಎಲ್ಲಾ ನಿಯಮಾವಳಿಗಳಿಗೆ ವಿರುದ್ಧವಾಗಿ ಕೇವಲ ಹತ್ತು ತಿಂಗಳ ಅವಧಿಗೆ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಇದು ಸರಿಯಲ್ಲ. ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸರಕಾರದ ಸಿಬ್ಬಂದಿ ಸೇವಾ ನಿಯಮಗಳಡಿ ಸಕ್ರಮಗೊಳಿಸಬೇಕು. ಅವರಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಿ ಸೇವಾ ಭದ್ರತೆಯನ್ನು ಒದಗಿಸಬೇಕು. ರಜಾ ಸೌಲಭ್ಯ ಮತ್ತು ಭವಿಷ್ಯ ನಿಧಿ, ಇಎಸ್‌ಐ ಸೌಲಭ್ಯವನ್ನು ಒದಗಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಯಥಾಸ್ಥಿತಿಗೆ ಆಗ್ರಹ : ರಾಜ್ಯ ಸರಕಾರವು ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಎಂದು ಬದಲಿಸಿ ಇಲಾಖೆಯನ್ನು ಪ್ರೌಢ ಶಾಲಾ ಶಿಕ್ಷಣ ಇಲಾಖೆಯೊಂದಿಗೆ ವಿಲೀನಗೊಳಿ ಸುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದೆ. ಈಗಾಗಲೇ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರೀಕ್ಷಾ ವಿಭಾಗವನ್ನು ಶಾಲಾ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿಯಲ್ಲಿ ವಿಲೀನಗೊಳಿಸಿರುತ್ತದೆ. ಆದರೆ ಇದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರುಗಳಲ್ಲಿ ಹಲವಾರು ರೀತಿಯ ಗೊಂದಲಗಳು ಮೂಡಿವೆ. ಆದುದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ವಿಲೀನಗೊಳಿಸುವ ಪ್ರಕ್ರಿಯೆಯನ್ನು ನಿಲ್ಲಿಸಿ ಯಥಾಸ್ಥಿತಿಯನ್ನು ಕಾಪಾಡಬೇಕು. ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಪದವಿ ಪೂರ್ವ ಹಂತವನ್ನು ಪ್ರೌಢ ಶಾಲೆಗಳಲ್ಲಿ ವಿಲೀನಗೊಳಿಸುವ ಬದಲು 9 ಮತ್ತು 10ನೇ ತರಗತಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯೊಂದಿಗೆ ಸೇರ್ಪಡೆಗೊಳಿಸುವ ಮೂಲಕ ಶೈಕ್ಷಣಿಕವಾಗಿ ಮತ್ತು ಗುಣಾತ್ಮ ಕವಾಗಿ ಉನ್ನತೀಕರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರ ಇಂತಹ ಯಾವುದೇ ದೊಡ್ಡ ಬದಲಾವಣೆಗಳನ್ನು ತರುವ ಮೊದಲು ಸಂಬಂಧಪಟ್ಟವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮನ್ವಯದಿಂದ ತೀರ್ಮಾನ ಕೈಗೊಳ್ಳಬೇಕು. ಸೂಕ್ತ ಶೈಕ್ಷಣಿಕ ನೀತಿ ನಿರ್ಣಯಗಳನ್ನು ಕೈಗೊಳ್ಳುವು ದಕ್ಕಾಗಿ ಶಿಕ್ಷಕರ ಸಂಘಟನೆಗಳು, ಶಿಕ್ಷಣ ತಜ್ಞರು ಮತ್ತು ಪೋಷಕ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಶೈಕ್ಷಣಿಕ ಸಮಿತಿ ( Education council) ಯನ್ನು ರಚಿಸಿಕೊಂಡು ಎಲ್ಲಾ ಶೈಕ್ಷಣಿಕ ವಿಚಾರಗಳ ಸಾಧಕ ಬಾಧಕಗಳ ಕುರಿತು ಚರ್ಚೆ, ಸಮಾಲೋಚನೆಗಳನ್ನು ನಡೆಸಿ ಸಹಮತ ಮತ್ತು ಸಮನ್ವಯದಿಂದ ಕೂಡಿ ತೀರ್ಮಾನ ಕೈಗೊಳ್ಳುವಂತಾಗಬೇಕು ಎಂದು ರಾಜ್ಯ ಸರಕಾರವನ್ನು ಎಸ್ ಆರ್ ಹರೀಶ್ ಆಚಾರ್ಯ ಆಗ್ರಹಿಸಿದರು. ಸಂಘಟನೆಯ ಪದಾಧಿಕಾರಿಗಳಾದ ಮಧುಸೂದನ ಗಟ್ಟಿ, ಭರತ್ ನಿಡ್ಪಳ್ಳಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.