Wednesday, October 23, 2024
spot_img
More

    Latest Posts

    ಫೇಸ್‌ಬುಕ್‌ ಗೆಳತಿ ಬಲೆಗೆ ಬಿದ್ದು 37 ಲಕ್ಷ ರೂ. ಕಳೆದುಕೊಂಡ ಸ್ವಾಮೀಜಿ

    ಬೆಂಗಳೂರು: ‘ಫೇಸ್‌ಬುಕ್’ನಲ್ಲಿ ಪರಿಚಯವಾಗಿ ವಿಡಿಯೊ ಕರೆ ಮೂಲಕ ಸಲುಗೆಯಿಂದ ಮಾತನಾಡುತ್ತಿದ್ದ ಯುವತಿಯೊಬ್ಬರ ಬಲೆಗೆ ಬಿದ್ದು ಕಂಬಾಳು ಮಹಾಸಂಸ್ಥಾನದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಸುಮಾರು 37 ಲಕ್ಷ ಕಳೆದುಕೊಂಡಿರುವ ಬಗ್ಗೆ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ‘ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರು ಹಣ ವರ್ಗಾವಣೆ ದಾಖಲೆ ಸಮೇತ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ಯುವತಿ ವರ್ಷಾ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    ‘ಸ್ವಾಮೀಜಿ ಅವರನ್ನು 2020ರಲ್ಲಿ ಪರಿಚಯ ಮಾಡಿಕೊಂಡಿದ್ದ ಯುವತಿ, ನಾನಾ ಕಾರಣ ನೀಡಿ ಹಣ ಪಡೆದಿದ್ದಾಳೆ. ಹಣ ವರ್ಗಾವಣೆಗೆ ಸಂಬಂಧಪಟ್ಟ ಎಲ್ಲ ದಾಖಲೆಗಳು ಸ್ವಾಮೀಜಿ ಬಳಿ ಇವೆ. ಯಾವ ಖಾತೆಗೆ ಹಣ ಜಮೆ ಆಗಿದೆ. ಬೇರೆ ಯಾರೆಲ್ಲ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

    ದೂರಿನ ವಿವರ: ‘ಫೇಸ್‌ಬುಕ್‌’ನಲ್ಲಿ ವರ್ಷಾ ಹೆಸರಿನ ಖಾತೆಯಿಂದ 2020ರಲ್ಲಿ ಫ್ರೆಂಡ್‌ ರಿಕ್ವೆಸ್ಟ್ ಬಂದಿತ್ತು. ಅದನ್ನು ಸ್ವೀಕರಿಸಿದ್ದೆ. ನಂತರ, ಯುವತಿ ಚಾಟಿಂಗ್ ಮಾಡಲಾರಂಭಿಸಿದ್ದಳು. ‘ಆಧ್ಯಾತ್ಮಿಕವಾಗಿ ಆಸಕ್ತಿ ಇದೆ’ ಎಂದು ಹೇಳಿ, ಮೊಬೈಲ್ ನಂಬರ್ ಪಡೆದುಕೊಂಡಿದ್ದಳು. ತನ್ನ ಮೊಬೈಲ್‌ ನಂಬರ್ ಸಹ ಕೊಟ್ಟಿದ್ದಳು’ ಎಂದು ಸ್ವಾಮೀಜಿ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

    ‘ಮೊಬೈಲ್ ನಂಬರ್ ಪಡೆದ ಬಳಿಕ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಲಾರಂಭಿಸಿದ್ದಳು. ತಾನೊಬ್ಬ ಅನಾಥೆ ಎನ್ನುತ್ತಿದ್ದ ವರ್ಷಾ, ವಿಡಿಯೊ ಕರೆ ಸಹ ಮಾಡಲಾರಂಭಿಸಿದ್ದಳು. ಹಲವು ಬಾರಿ ವಿಡಿಯೊ ಕರೆ ಮಾಡಿದ್ದ ಯುವತಿ, ಎಂದಿಗೂ ಮುಖ ತೋರಿಸಿರಲಿಲ್ಲ. ಕೈ–ಕಾಲುಗಳನ್ನು ಮಾತ್ರ ತೋರಿಸಿ ಮಾತನಾಡುತ್ತಿದ್ದಳು’ ಎಂದೂ ಸ್ವಾಮೀಜಿ ದೂರನಲ್ಲಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

    ಸ್ವಾಮೀಜಿ ವಂಚನೆ ಪ್ರಕರಣದಲ್ಲಿ ಆರೋಪಿ ಕಡೆಯವನು ಎನ್ನಲಾದ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಬಾಲದಂಡಿ, ಬೆಂಗಳೂರು ಗ್ರಾಮಾಂತರ ಎಸ್ಪಿ ಹೇಳಿದ್ದಾರೆ

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss