ಪುದುಚೇರಿ: ಪುದುಚೇರಿ ಮನಕುಲ ವಿನಾಯಕ ದೇವಸ್ಥಾನಕ್ಕೆ ಸೇರಿದ್ದ ಆನೆಯೊಂದು ಹೃದಯಾಘಾತಕ್ಕೊಳಗಾಗಿ ಬುಧವಾರ ಸಾವನ್ನಪ್ಪಿದೆ.
ಲಕ್ಷ್ಮಿ ಸಾವನ್ನಪ್ಪಿದ ಆನೆ. ಸರ್ಕಾರಿ ಕಾಲೇಜಿನ ಮೈದಾನದಲ್ಲಿ ವಿಹಾರ ಮಾಡುತ್ತಿದ್ದ ವೇಳೆ ಆನೆ ಒಮ್ಮೆಲೆ ಕುಸಿದು ಬಿದ್ದಿದೆ. ಕೂಡಲೇ ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಲಾಯಿತಾದರೂ, ಆ ವೇಳೆಗಾಗಲೇ ಆನೆ ಸಾವನ್ನಪ್ಪಿತ್ತು. ಆನೆಗೆ ಯಾವುದೇ ರೀತಿಯ ಅನಾರೋಗ್ಯ ಇರಲಿಲ್ಲ ಎಂದು ದೇವಸ್ಥಾನದ ಪ್ರಧಾನ ಅರ್ಚಕರು ಹೇಳಿದ್ದಾರೆ.ಆನೆಯನ್ನು ಕೈಗಾರಿಕೋದ್ಯಮಿಯೊಬ್ಬರು 1995ರಲ್ಲಿ ದೇವಳಕ್ಕೆ ದಾನ ಮಾಡಿದ್ದರು. ಬಳಿಕ ಆಕೆಗೆ ಲಕ್ಷ್ಮಿ ಎಂದು ನಾಮಕರಣ ಮಾಡಲಾಗಿತ್ತು. ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಹಾಗೂ ವಿದೇಶದ ಭಕ್ತರು ಕೂಡಾ ಆನೆಯ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಆಗಮಿಸುತ್ತಿದ್ದರು. ದೇವಳದ ಜಾಗದಲ್ಲಿ ಆನೆಯ ಅಂತ್ಯಕ್ರಿಯೆ ನಡೆಸಲಾಯಿತು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರನ್ ತಿಳಿಸಿದ್ದಾರೆ.