ಬೆಳ್ತಂಗಡಿ: ನೆರಿಯ ಸಮೀಪದ ತೋಟತ್ತಾಡಿಯ ಬಯಲು ಬಸ್ತಿ ಬಳಿ ಆನೆಯೊಂದು ರಸ್ತೆಯಲ್ಲಿ ಚಲಿಸುತಿದ್ದ ಕಾರಿಗೆ ಹಾನಿ ಮಾಡಿದ ಪರಿಣಾಮ ಓರ್ವ ಗಾಯಗೊಂಡ ಘಟನೆ ನಡೆದಿದೆ. ಆನೆ ರಸ್ತೆಯಲ್ಲಿ ನಡೆದು ಹೋಗುತ್ತಿರುವುದನ್ನ ಕಂಡ ಚಾಲಕ ಕಾರನ್ನು ಚಾಲಕ ನಿಲ್ಲಿಸಿದ್ದಾರೆ. ಈ ವೇಳೆ ನಿಂತ ಕಾರಿನ ಬಳಿಗೆ ಬಂದ ಆನೆಯು ಕಾರನ್ನು ಎತ್ತಿ ಹಾನಿ ಮಾಡಿದೆ. ಕಾರಿನಲ್ಲಿ ಮಗು ಸಹಿತ ಆರು ಮಂದಿ ಪ್ರಯಾಣಿಸುತ್ತಿದ್ದು, ಘಟನೆಯಲ್ಲಿ ಓರ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆಯು ಈ ಪರಿಸರದಲ್ಲಿ ಓಡಾಟ ನಡೆಸಿದ್ದು, ಒಬ್ಬರ ಮನೆ ಅಂಗಳಕ್ಕೂ ಹೋಗಿತ್ತು. ಅಲ್ಲದೆ ರಸ್ತೆ ಬದಿ ಇರುವ ಮನೆಯೊಂದರ ಗೇಟನ್ನು ಮುರಿಯಲು ಯತ್ನಿಸಿದೆ. ಈ ವೇಳೆ ಸುತ್ತಮುತ್ತಲ ಮನೆಯವರು ಬೊಬ್ಬೆ ಹೊಡೆದಿದ್ದು ಆನೆಯು ಮತ್ತೆ ರಸ್ತೆಗೆ ಬಂದಿತ್ತು. ಕಾರನ್ನು ಎತ್ತಿ ಹಾಕಿದ ಆನೆ ಬಳಿಕ ಸಮೀಪದ ರಬ್ಬರ್ ತೋಟದಲ್ಲಿ ಮತ್ತೆ ಕಂಡು ಬಂದಿದೆ. ಈ ವೇಳೆ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಓಡಿಸಲು ಕ್ರಮ ಕೈಗೊಂಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳಿಂದ ನಿರಂತರ ಕೃಷಿ ಹಾನಿ ಉಂಟಾಗುತ್ತಿದ್ದು, ಮೊದಲ ಬಾರಿಗೆ ವಾಹನದ ಮೇಲೆ ದಾಳಿ ನಡೆಸಿದೆ. ಇದರಿಂದ ತೋಟತ್ತಾಡಿ, ನೆರಿಯ, ಚಾರ್ಮಾಡಿ, ಚಿಬಿದ್ರೆ ಮುಂಡಾಜೆ ಮೊದಲಾದ ಭಾಗಗಳ ಜನರಲ್ಲಿ ಭೀತಿ ಆವರಿಸಿದೆ. ಚಾರ್ಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೋಟತ್ತಾಡಿ ಪರಿಸರದಲ್ಲಿ ಸೋಮವಾರ ಬೆಳಗ್ಗೆ ಕಾಡಾನೆ ಕಂಡುಬಂದಿತ್ತು. ಈಗಾಗಲೇ ಸ್ಥಳಕ್ಕೆ ಡಿಎಫ್ಒ ಸೇರಿದಂತೆ ಅಧಿಕಾರಿಗಳು ತೆರಳಿದ್ದಾರೆ.
©2021 Tulunada Surya | Developed by CuriousLabs