ಉಳ್ಳಾಲ: ಸಮುದ್ರ ವಿಹಾರಕ್ಕೆಂದು ಬಂದಿದ್ದ ಐವರು ವೈದ್ಯರಲ್ಲಿ ಓರ್ವ ವೈದ್ಯ ಸಮುದ್ರಪಾಲಾದ ಘಟನೆ ಸೋಮೇಶ್ವರ ರುದ್ರಪಾದೆ ಸಮೀಪ ನಿನ್ನೆ ತಡರಾತ್ರಿ 11 ಗಂಟೆ ವೇಳೆ ಸಂಭವಿಸಿದೆ.
ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.ಮೃತ ವೈದ್ಯ ನಗರದ ಆಸ್ಪತ್ರೆಯಲ್ಲಿ ಸರ್ಜನ್ ಆಗಿರುವ, ಬೆಂಗಳೂರು ರಾಮನಗರ ನಿವಾಸಿ ಡಾ. ಆಶೀಕ್ ಗೌಡ (30) ಎಂದು ಗುರುತಿಸಲಾಗಿದೆ.ನಿನ್ನೆ ತಡರಾತ್ರಿ ನಗರದಿಂದ ಸೋಮೇಶ್ವರಕ್ಕೆ ಮೃತ ವೈದ್ಯ ಸೇರಿದಂತೆ ಇನ್ನೋರ್ವ ಸರ್ಜನ್ ಕುಂದಾಪುರ ಮೂಲದ ಡಾ.ಪ್ರದೀಶ್ ಮೂವರು ಇಂಟನ್೯ಶಿಪ್ ನಡೆಸುತ್ತಿರುವ ವೈದ್ಯೆಯರ ಜೊತೆಗೆ ಸಮುದ್ರ ವಿಹಾರಕ್ಕೆಂದು ಸೋಮೇಶ್ವರಕ್ಕೆ ಬಂದಿದ್ದಾರೆ. ರುದ್ರಪಾದೆಯಲ್ಲಿ ವಿಹರಿಸುತ್ತಿದ್ದ ಸಂದರ್ಭ ಡಾ.ಪ್ರದೀಶ್ ಕಲ್ಲಿನಿಂದ ಸಮುದ್ರಕ್ಕೆ ಜಾರಿ ಬಿದ್ದಿದ್ದಾರೆ. ನೀರಿನಲ್ಲಿ ನಿಂತು ರಕ್ಷಣೆಗೆ ಕೂಗುತ್ತಿದ್ದ ಸಂದರ್ಭ ಡಾ.ಆಶೀಕ್ ಗೌಡ ಇಣುಕುವ ಕ್ಷಣದಲ್ಲಿ ಕಾಲುಜಾರಿ ಅವರೂ ಬಿದ್ದು ಸಮುದ್ರಪಾಲಾಗಿದ್ದಾರೆ. ಡಾ. ಪ್ರದೀಶ್ ಸಣ್ಣ ಕಲ್ಲು ಹಿಡಿದು ಸಮುದ್ರದಿಂದ ಪಾರಾಗಿದ್ದಾರೆ. ತಡರಾತ್ರಿವರೆಗೂ ಅಗ್ಮಿಶಾಮಕ ದಳ, ಉಳ್ಳಾಲ ಪೊಲೀಸ್ ಠಾಣೆಯವರು ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಇಂದು ಅಲ್ಲೇ ಸಮುದ್ರ ತೀರದಲ್ಲಿ ಡಾ.ಆಶೀಖ್ ಮೃತದೇಹ ಪತ್ತೆಯಾಗಿದೆ.