ಮಂಗಳೂರು: ಪತ್ರಿಕಾ ಭವನ ಕಟ್ಟಡದ ಅಭಿವೃದ್ಧಿ ಕಾಮಗಾರಿಗೆ ಸಂಸದರ ನಿಧಿಯಿಂದ 10 ಲಕ್ಷ ರೂ. ಮಂಜೂರುಗೊಳಿಸಿರುವುದಾಗಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದ ಉರ್ವ ಮಾರ್ಕೆಟ್ ಬಳಿಯ ಪತ್ರಿಕಾ ಭವನದಲ್ಲಿರುವ ಮಂಗಳೂರು ಪ್ರೆಸ್‌ಕ್ಲಬ್‌ನ ನವೀಕೃತ ಕಚೇರಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಅತ್ಯಾಧುನಿಕ ರೀತಿಯಲ್ಲಿ ಈ ಪತ್ರಿಕಾ ಭವನದ ನವೀಕರಣ ನೆರವೇರಿಸಲಾಗಿದೆ. ಮಂಗಳೂರಲ್ಲಿ ಪತ್ರಕರ್ತರ ಸಂಘ, ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಈ ಮೂರು ಸಂಘಟನೆಗಳು ಇದ್ದರೂ ಎಲ್ಲವೂ ಒಗ್ಗಟ್ಟಿನಿಂದ ಇದೆ. ಮಂಗಳೂರಿನ ಪತ್ರಕರ್ತರು ಕೂಡ ಎಡ, ಬಲಗಳಲ್ಲಿ ಗುರುತಿಸಿಕೊಳ್ಳದೆ ಸಮಾನ, ನೇರ ಮನಸ್ಥಿತಿಯನ್ನು ಹೊಂದಿದ್ದಾರೆ. ನನ್ನ ರಾಜಕೀಯ ಏಳ್ಗೆಗೆ ಪಕ್ಷ, ಸಂಘಟನೆ ಹೊರತುಪಡಿಸಿದರೆ, ಮಂಗಳೂರಿನ ಪತ್ರಕರ್ತರೂ ಕಾರಣರಾಗಿದ್ದಾರೆ. ಇಡೀ ರಾಜ್ಯಕ್ಕೆ ಮಂಗಳೂರಿನ ಪತ್ರಕರ್ತರ ತಂಡ ಆದರ್ಶಪ್ರಾಯವಾಗಿದೆ. ಪತ್ರಕರ್ತರ ಅಭ್ಯುದಯಕ್ಕೆ ಸಹಕಾರ ನೀಡಲು ಬದ್ಧವಾಗಿರುವುದಾಗಿ ಹೇಳಿದರು.
ನವೀಕೃತ ಕಚೇರಿಯನ್ನು ಉದ್ಘಾಟಿಸಿದ ಮಂಗಳೂರು ಪ್ರೆಸ್‌ಕ್ಲಬ್ ಸ್ಥಾಪಕ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಕೆ.ಆನಂದ ಶೆಟ್ಟಿ, 2002ರಲ್ಲಿ ಸ್ಥಾಪನೆಯಾದ ಪ್ರೆಸ್‌ಕ್ಲಬ್ ಕಳೆದ 21 ವರ್ಷಗಳಲ್ಲಿ ಸಾಗಿಬಂದ ಹಾದಿಯನ್ನು ಮೆಲುಕು ಹಾಕಿದರು. 2007ರಲ್ಲಿ ಲೇಡಿಹಿಲ್‌ನ ಈ ಕಟ್ಟಡಕ್ಕೆ ಪ್ರೆಸ್‌ಕ್ಲಬ್ ಸ್ಥಳಾಂತರಗೊಂಡು ಕಾರ್ಯನಿರ್ವಹಿಸಲಾರಂಭಿಸಿತು. ಬಳಿಕ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರೆಸ್‌ಕ್ಲಬ್ ಆರಂಭವಾಯಿತು. ಮುಂದೆ ಕ್ಲಬ್ ಹೌಸ್ ನಿರ್ಮಿಸುವ ಇಂಗಿತವನ್ನು ವ್ಯಕ್ತಪಡಿಸಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಮೂರು ಸಂಘಟನೆಗಳು ಒಂದಾಗಿ ರಾಜ್ಯಕ್ಕೆ ಮಾದರಿಯಾಗಿ ಇಲ್ಲಿ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ನ.20ರಂದು ಪತ್ರಕರ್ತರ ಜಿಲ್ಲಾ ಸಮ್ಮೇಳನ ಮಂಗಳೂರಿನಲ್ಲಿ ನಡೆಯಲಿದೆ. ಜನವರಿ 4ರಿಂದ 6ರ ವರೆಗೆ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯ ನಡೆಯಲಿದೆ. ಬೆಂಗಳೂರಿಗೆ ತೆರಳುವ ಇಲ್ಲಿನ ಪತ್ರಕರ್ತರಿಗೆ ವಾಸ್ತವ್ಯ ಸಲುವಾಗಿ ಬೆಂಗಳೂರು ಪ್ರೆಸ್‌ಕ್ಲಬ್ ಜತೆ ಒಡಂಬಡಿಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ, ಪ್ರೆಸ್‌ಕ್ಲಬ್ ಬೆಳೆದು ಬಂದ ಹಾದಿಯನ್ನು ವಿವರಿಸಿದರಲ್ಲದೆ, ಪ್ರೆಸ್‌ಕ್ಲಬ್ ವತಿಯಿಂದ ರಿಕ್ರಿಯೇಷನ್ ಕ್ಲಬ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದರು. ಇದೇ ಸಂದರ್ಭ ನವೀಕರಣದ ಗುತ್ತಿಗೆದಾರ ಪುರಂದರ, ಪ್ರೆಸ್‌ಕ್ಲಬ್ ಮೆನೇಜರ್ ಅಭಿಷೇಕ್, ಉದ್ಯೋಗಿ ಚಂಚಲಾಕ್ಷಿ ಇವರನ್ನು ಗೌರವಿಸಲಾಯಿತು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಪತ್ರಿಕಾ ಭವನ ಟ್ರಸ್ಟಿಗಳಾದ ಅನ್ನು ಮಂಗಳೂರು, ಜಗನ್ನಾಥ ಶೆಟ್ಟಿ ಬಾಳ, ಹರ್ಷ ರಾವ್, ರವಿ ಪೊಸವಣಿಕೆ, ಪುಷ್ಪರಾಜ್ ಬಿ. ಎನ್., ಜಯಕಿರಣ ಪತ್ರಿಕೆಯ ಪ್ರಕಾಶ್ ಪಾಂಡೇಶ್ವರ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟಬೀಡು, ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಉಪಾಧ್ಯಕ್ಷ ಮೊಹಮ್ಮದ ಆರೀಫ್, ಹಿರಿಯ ಪತ್ರಕರ್ತ ಕೇಶವ ಕುಂದರ್ ಉಪಸ್ಥಿತರಿದ್ದರು.
ಪತ್ರಿಕಾ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವೇಣುವಿನೋದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕಾ ಭವನ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರೆಸ್‌ಕ್ಲಬ್ ಕಾರ್ಯಕಾರಿಣಿ ಸಮಿತಿ ಸದಸ್ಯ ಆತ್ಮಭೂಷಣ್ ವಂದಿಸಿದರು