Wednesday, October 9, 2024
spot_img
More

    Latest Posts

    ಉಡುಪಿ: ಅ.29ಕ್ಕೆ ಸಾಂಸ್ಕೃತಿಕ ವೈಭವಕ್ಕೆ ಚಾಲನೆ- ಕೆಂದ್ರ ಸಚಿವ ನಿತಿನ್ ಗಡ್ಕರಿ ಆಗಮನ

    ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ವಿಶ್ವ ಬಂಟರ ಸಮ್ಮೇಳನ-2023 ( ಕ್ರೀಡಾ ಸಂಗಮ ಮತ್ತು ಸಾಂಸ್ಕೃತಿಕ ಸಂಭ್ರಮ) ಇದೇ ಅ.28 ಮತ್ತು 29ರಂದು ಉಡುಪಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಅಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.

    ಅದ್ಧೂರಿ ಮೆರವಣಿಗೆ; 7 ಸಾವಿರಕ್ಕೂ ಅಧಿಕ‌ ಮಂದಿ‌ ಭಾಗವಹಿಸುವ ನಿರೀಕ್ಷೆ; ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 28ರಂದು ಬೆಳಿಗ್ಗೆ 9 ಗಂಟೆಗೆ ಉಡುಪಿ‌ ನಗರದ ಬೋರ್ಡ್ ಹೈಸ್ಕೂಲ್ ನಲ್ಲಿ ಬೃಹತ್ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಮೆರವಣಿಗೆಯು ನಗರಸಭೆ, ಹಳೆ ಡಯಾನ ಸರ್ಕಲ್, ಬಿಗ್ ಬಜಾರ್ ಮೂಲಕ ಅಜ್ಜರಕಾಡು ಭುಜಂಗ ಪಾರ್ಕ್ ಮಾರ್ಗವಾಗಿ ಅಜ್ಜರಕಾಡು ಮೈದಾನವನ್ನು ಪ್ರವೇಶಿಸಲಿದೆ. ಈ ಅದ್ದೂರಿ ಮೆರವಣಿಗೆಯಲ್ಲಿ ವಿವಿಧ ಭಾಗಗಳ ಸುಮಾರು 62 ಕ್ಕೂ ಅಧಿಕ ಬಂಟರ ಸಂಘಗಳ 6,000-7,000ಕ್ಕೂ ಅಧಿಕ‌ ಮಂದಿ‌ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ವಿವಿಧ ಕಲಾ ತಂಡಗಳು, ಉಡುಪಿ ಕಡೆಗೋಲು ಕೃಷ್ಣ, ಕಟೀಲು ದುರ್ಗಾಪರಮೇಶ್ವರಿ ಹೀಗೆ ವಿವಿಧ ಸ್ತಬ್ಧ ಚಿತ್ರಗಳು, ಕಂಬಳದ ಕೋಣಗಳು, ಕೇರಳದ ತೈಯ್ಯಂ, ಹುಲಿ ವೇಷ, ಕೀಲುಕುದುರೆ ಗೊಂಬೆಗಳು, ಹೊನ್ನಾವರ ಬ್ಯಾಂಡ್ ಸೆಟ್, ಅಗೋಳಿ ಮಂಜಣ್ಣನ ವೇಷಧಾರಿ, ಚೆಂಡೆ, ವಾದ್ಯ, ಡೋಲು, ನಾಗಸ್ವರ, ಬಣ್ಣದ ಕೊಡೆಗಳು ಹಾಗೂ ವಿವಿಧ ವಿನೋದಾವಳಿಗಳು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಲಿವೆ. ಸಿಎಂ ಸಿದ್ದರಾಮಯ್ಯನವರಿಂದ ಉದ್ಘಾಟನೆ;  ಆ ಬಳಿಕ ಅಜ್ಜರಕಾಡು ಮೈದಾನದಲ್ಲಿ ಎಲ್ಲ ಬಂಟರ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮ್ಮೇಳನವನ್ನು ಉದ್ಘಾಟಿಸಿ, ಇದೇ ಸಂದರ್ಭ ಕ್ರೀಡೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬ್ಯಾಡ್ಮಿಂಟನ್ ಏಷ್ಯನ್ ಗೇಮ್ಸ್ ವಿಜೇತ ಚಿರಾಗ್ ಶೆಟ್ಟಿ, ಅಂಡರ್ 19 ವರ್ಲ್ಡ್ ಜೂನಿಯರ್ ಚ್ಯಾಂಪಿಯನ್ ಶಿಪ್ ವಿಜೇತ ಅಯುಷ್ ಶೆಟ್ಟಿ ಕಾರ್ಕಳ ಸಾಥ್ ನೀಡಲಿದ್ದಾರೆ ಎಂದರು. ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು, ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಪಾದರು, ಒಡಿಯೂರು ಗುರುದೇವದತ್ತ ಸಂಸ್ಥಾನ ಗುರುದೇವಾನಂದ ಸ್ವಾಮೀಜಿ, ಬಾರ್ಕೂರು ಬಾರ್ಗವ ಮಹಾಸಂಸ್ಥಾನದ ಡಾ. ವಿಶ್ವ ಸಂತೋಷ್ ಭಾರತಿ ಶ್ರೀಪಾದರು, ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮಿ ನಾರಾಯಣ ಅಸ್ರಣ್ಣ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ ಮತ್ತು ನೈನಿತಾ ಪ್ರವೀಣ್ ಶೆಟ್ಟಿ, ಹೇರಂಬ ಇಂಡಸ್ಟ್ರೀಸ್ ಇದರ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ, ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಂಬೈ ಇದರ ಸಿಎಂಡಿ ತೋನ್ಸೆ ಆನಂದ ಎಂ. ಶೆಟ್ಟಿ ಮತ್ತು ಶಶಿರೇಖಾ ಆನಂದ ಶೆಟ್ಟಿ, ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಚಿವ ಬಿ.ರಮಾನಾಥ ರೈ, ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    ಕ್ರೀಡೋತ್ಸವದಲ್ಲಿ ಜಾಗತಿಕ ಬಂಟರ ಸಂಘಗಗಳ ವಿವಿಧ ತಂಡಗಳು ಭಾಗವಹಿಸಲಿದ್ದು, ಏಕಕಾಲದಲ್ಲಿ ಪುರುಷರ ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಮಹಿಳೆಯರ ತ್ರೋಬಾಲ್, ಹಗ್ಗಜಗ್ಗಾಟ ಜರುಗಲಿದೆ. ಎಲ್ಲಾ ವಯೋಮಾನದವರಿಗೆ ಅಥ್ಲೆಟಿಕ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರತಿ ವಿಭಾಗದ ವಿಜೇತ ತಂಡಗಳಿಗೆ ನಗದು ಬಹುಮಾನ ಪ್ರಥಮ-1,00,000, ದ್ವಿತೀಯ- 75,000 ತೃತೀಯ ಹಾಗೂ ಚತುರ್ಥ ತಲಾ 50,000 ನಗದು ಹಾಗೂ ಬಂಟರ ಕಪ್ ನೀಡಿ ಗೌರವಿಸಲಾಗುವುದು. ಹೊನಲು ಬೆಳಕಿನ ಕಬಡ್ಡಿ: ಅಂದು ಅಪರಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯ ತನಕ ಪ್ರೋ ಕಬಡ್ಡಿ ಮಾದರಿಯಲ್ಲಿ ಎಂಟು ತಂಡಗಳ ಮಧ್ಯೆ ಕಬಡ್ಡಿ ಪಂದ್ಯಾಟ ನಡೆಯಲಿದೆ. ಅದೇ ವೇದಿಕೆಯಲ್ಲಿ ಸಮಾಜದ ಪ್ರಮುಖ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ಪ್ರಮುಖರಾದ ಬ್ಯಾಡ್ಮಿಂಟನ್ ಏಷ್ಯನ್ ಗೇಮ್ಸ್ ವಿಜೇತ ಚಿರಾಗ್ ಶೆಟ್ಟಿ, ಅಂಡರ್ 19 ವರ್ಲ್ಡ್ ಜೂನಿಯರ್ ಚ್ಯಾಂಪಿಯನ್ ಶಿಪ್ ವಿಜೇತ ಅಯುಷ್ ಶೆಟ್ಟಿ ಕಾರ್ಕಳ, ಡಾ. ಎ. ಸದಾನಂದ ಶೆಟ್ಟಿ ಮಂಗಳೂರು, ಡಾ. ಎಮ್. ಎನ್. ರಾಜೇಂದ್ರ ಕುಮಾರ್, ಕೆ.‌ ಪ್ರಕಾಶ್ ಶೆಟ್ಟಿ, ಚಂದ್ರಹಾಸ ಕೆ.ಶೆಟ್ಟಿ, ಶ್ರೀ ಪ್ರವೀಣ್ ಶೆಟ್ಟಿ ವಕ್ವಾಡಿ, ಸತೀಶ್ ಶೆಟ್ಟಿ ಪಟ್ಲ, ಸಂತೋಷ್ ಶೆಟ್ಟಿ ಪುಣೆ, ವಿಶು ಶೆಟ್ಟಿ ಅಂಬಲಪಾಡಿ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಹೇಳಿದರು. ಸಿನಿತಾರೆಯ ಮೆರಗು: ಸಮ್ಮೇಳನದಲ್ಲಿ ದೇಶದ ಪ್ರಮುಖ ಸಿನಿ‌ತಾರೆಯರಾದ ಸುನಿಲ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಐಶ್ವರ್ಯ ರೈ ಬಚ್ಚನ್, ಶಿಲ್ಪಾ ಶೆಟ್ಟಿ ಕುಂದ್ರಾ, ರಿಷಬ್ ಶೆಟ್ಟಿ, ಗುರುಕಿರಣ್ ಶೆಟ್ಟಿ, ಶ್ರೀನಿಧಿ ಶೆಟ್ಟಿ, ಶಿವಧ್ವಜ್ ಶೆಟ್ಟಿ, ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ರಾಜ್ ಬಿ. ಶೆಟ್ಟಿ, ರೂಪೇಶ್ ಶೆಟ್ಟಿ, ಯಶ್ ಹಾಗೂ ಭಾರತದ ಹೆಸರಾಂತ ಚಿತ್ರತಾರೆಯರು, ನಿರ್ಮಾಪಕರು, ನಿರ್ದೇಶಕರು ಭಾಗವಹಿಸಲಿದ್ದಾರೆ. ಅಕ್ಟೋಬರ್ 29ರಂದು ಸಾಂಸ್ಕೃತಿಕ ವೈಭವದ ಉದ್ಘಾಟನಾ ಸಮಾರಂಭ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ನಡೆಯಲಿದ್ದು, ಅಂದು ಬೆಳಿಗ್ಗೆ 9 ಗಂಟೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆಗಮಿಸಲಿದ್ದಾರೆ. ಕಾರ್ಯಕ್ರ‌ಮವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮೋಹನ್ ಆಳ್ವಾ ನೆರವೇರಿಸಲಿದ್ದಾರೆ. ಮುಂಬೈ ಉತ್ತರ ಸಂಸದ ಗೋಪಾಲ ಶೆಟ್ಟಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಶೆಟ್ಟಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು: ಸಾಂಸ್ಕೃತಿಕ ಬೈಭವದಲ್ಲಿ ಸುಮಾರು 30 ತಂಡಗಳು ಸ್ಪರ್ಧಿಸಲಿವೆ. ಪ್ರತೀ ತಂಡಗಳಿಗೆ 2 +6 ನಿಮಿಷ ಸಮಯ ನೀಡಲಾಗುತ್ತಿದೆ. ಗುತ್ತಿನ ಅರಮನೆಯ ವೇದಿಕೆಯಲ್ಲಿ ಸ್ಪರ್ಧೆ ನಡೆಯಲಿದೆ. ಮೂರು ಜನ ಸೆಲೆಬ್ರಿಟಿಗಳು ತೀರ್ಪುಗಾರರಾಗಿರಲಿದ್ದಾರೆ. ಹಾಗೆ, ಬೆಳಿಗ್ಗೆ 11 ಗಂಟೆಗೆ ಅಮ್ಮಣ್ಣಿ ರಾಮಣ್ಣ ಸಭಾಭವನದಲ್ಲಿ ‘ಸ್ಥಿತ್ಯಂತರದಲ್ಲಿ ಬಂಟರು: ಶಿಕ್ಷಣ ಮತ್ತು ನಿರುದ್ಯೋಗ’, ಹಾಗೂವ ಕವಿ ಸಮಯ- ಕಾವ್ಯನಮನ – ಚಿತ್ತ ಚಿತ್ತಾರ’ ಎಂಬ ಗೋಷ್ಠಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ವಿಶ್ವಬಂಟರ ಸಾಂಸ್ಕೃತಿಕ ವೈಭವದ ಜೊತೆ ಕಾರ್ಯದರ್ಶಿ ಹಾಗೂ ಸಂಚಾಲಕ ಚಂದ್ರಹಾಸ ಡಿ. ಶೆಟ್ಟಿ, ವಿಶ್ವ ಬಂಟರ ಕ್ರೀಡಾಕೂಟದ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರು, ಸಹಸಂಚಾಲಕ ಡಾ. ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss