ಉಡುಪಿ : ವ್ಯವಸ್ಥಿತ ರೀತಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಂಗ್ರಹಣೆ ಮತ್ತು ಅವುಗಳ ವೈಜ್ಞಾನಿಕ ವಿಲೇವಾರಿಯಲ್ಲಿ ರಾಜ್ಯದಲ್ಲೇ ಮಾದರಿ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಉಡುಪಿ ಜಿಲ್ಲೆಯಲ್ಲಿನ ಎಲ್ಲಾ 155 ಗ್ರಾಮ ಪಂಚಾಯತ್ ಗಳಲ್ಲಿ ಕಸ ಸಂಗ್ರಹಣೆಗಾಗಿ ಸ್ವಚ್ಛವಾಹಿನಿ ಹೆಸರಿನ ಕಸ ಸಂಗ್ರಹಣೆಯ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯತ್ ವತಿಯಿಂದ ಕೋಡಿಬೆಂಗ್ರೆ ಗ್ರಾಮಕ್ಕೆ ಬಾರ್ಜ್ ಮೂಲಕ ವಾಹನ ತೆರಳಿ ಒಣತ್ಯಾಜ್ಯ ಸಂಗ್ರಹ ಮಾಡುವುದರ ಮೂಲಕ , ಯಾವುದೇ ಸಂದರ್ಭದಲ್ಲಿ, ಯಾವುದೇ ಗ್ರಾಮ ಕಸದ ಸಮಸ್ಯೆಗೆ ಒಳಗಾಗದಂತೆ ಸ್ವಚ್ಛ ಗ್ರಾಮವಾಗಿ ರೂಪುಗೊಳ್ಳಲು ವಿಶೇಷ ಪ್ರಯತ್ನ ಕೈಗೊಳ್ಳಲಾಗಿದೆ.
ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಬೆಂಗ್ರೆ ಗ್ರಾಮಕ್ಕೆ ಸಂತೆಕಟ್ಟೆ ರಸ್ತೆ ಮೂಲಕ 35 ಕಿಮೀ ಕ್ರಮಿಸಬೇಕಿದ್ದು, ಒಂದು ಗ್ರಾಮದ ತ್ಯಾಜ್ಯ ಸಂಗ್ರಹಣೆಗೆ ಇಷ್ಟು ದೂರ ಕ್ರಮಿಸುವುದು ಪಂಚಾಯತ್ ನ ಎಸ್.ಎಲ್.ಆರ್.ಎಂ ಘಟಕದ ಸಿಬ್ಬಂದಿ ಹಾಗೂ ವಾಹನಕ್ಕೆ ನಷ್ಠವಾಗುತ್ತಿದ್ದು, ಗ್ರಾಮ ಪಂಚಾಯತ್ ಹಸಿ ಕಸವನ್ನು ಮೂಲದಲ್ಲಿಯೇ ವಿಲೇವಾರಿ ಮಾಡುವ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದ್ದು, ಒಣಕಸ ಸಂಗ್ರಹಣೆಯನ್ನು 15 ದಿನಕ್ಕೊಮ್ಮೆ ಮಾಡಲಾಗುತ್ತಿತ್ತು.
ಪ್ರಸ್ತುತ ಕೋಡಿಬೆಂಗ್ರೆ ಗ್ರಾಮಕ್ಕೆ ಬಾರ್ಜ್ ಸೇವೆ ಆರಂಭಗೊಂಡಿರುವುದರಿಂದ ಈ ಗ್ರಾಮದಲ್ಲಿಯೂ ಒಣ ಕಸ ಸಂಗ್ರಹವನ್ನು ಎಲ್ಲಾ ಗ್ರಾಮಗಳಂತೆಯೇ ಈಗ ನಿರಂತರವಾಗಿ ಸಂಗ್ರಹಿಸುತ್ತಿದ್ದು, ವಾರಕೊಮ್ಮೆ ಸುಮಾರು 1 ಟನ್ ಗೂ ಅಧಿಕ ಒಣ ಕಸ ಸಂಗ್ರಹ ಮಾಡಲಾಗುತ್ತಿದೆ. ಇದಕ್ಕಾಗಿ ಪಂಚಾಯತ್‌ನ ಸ್ವಚ್ಚ ವಾಹಿನಿ ವಾಹನದೊಂದಿಗೆ,ಚಾಲಕ ಹಾಗು ಕಸ ಸಂಗ್ರಹ ಸಿಬ್ಬಂದಿ ಬಾರ್ಜ್ ನಲ್ಲಿಯೇ ತೆರಳಿ ಸಂಗ್ರಹ ಮಾಡುವ ಮೂಲಕ ಎಸ್.ಎಲ್.ಆರ್.ಎಂ ಘಟಕದ ಸಿಬ್ಬಂದಿಗಳು ಯಾವುದೇ ಸಂದರ್ಭದಲ್ಲೂ ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕಸ ಸಂಗ್ರಹಣೆಗೆ ನಾವು ಬದ್ದ ಎಂದು ಸಾರಿದ್ದಾರೆ. ಕೋಡಿಬೆಂಗ್ರೆ ಗ್ರಾಮದಲ್ಲಿ 300 ಕ್ಕೂ ಹೆಚ್ಚು ಮನೆಗಳಿದ್ದು, ಕೋಡಿ ಗ್ರಾಮ ಪಂಚಾಯತ್ ನಿಂದ ರಸ್ತೆ ಮೂಲಕ 35 ಕಿಮೀ ದೂರವಿದ್ದು, ದೂರದ ಕಾರಣ ಹಿಂದೆ 15 ದಿನಕ್ಕೊಮ್ಮೆ ಒಣಕಸ ಸಂಗ್ರಹ ಮಾಡುತ್ತಿದ್ದು, ಈಗ ಬಾರ್ಜ್ ಮೂಲಕ ಕಸ ಸಂಗ್ರಹಣಾ ವಾಹನವನ್ನು ತೆಗೆದುಕೊಂಡು ಹೋಗಿ ವಾರಕ್ಕೊಮ್ಮೆ ಕಸ ಸಂಗ್ರಹ ಮಾಡಲಾಗುತ್ತಿದೆ. ಗ್ರಾಮಕ್ಕೆ ಬಾರ್ಜ್ ಮೂಲಕ ಕೇವಲ 10 ಕಿಮೀ ಆಗಲಿದ್ದು, ಇದರಿಂದ ಕಸ ಸಂಗ್ರಹಣಾ ವಾಹನದ ವೆಚ್ಚ ಮತ್ತು ಸಿಬ್ಬಂದಿಗಳ ಸಮಯ ಉಳಿತಾಯವಾಗುತ್ತಿದೆ. ಪ್ರಸ್ತುತ ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಶುಲ್ಕದ ಶೇ.100 ರಷ್ಟು ಮೊತ್ತ ಸಂಗ್ರಹವಾಗುತ್ತಿದ್ದು, ಎಸ್.ಎಲ್.ಆರ್.ಎಂ. ಘಟಕವು ಈ ಮೊತ್ತದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿದ್ದು, ಘಟಕದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮತ್ತು ವಾಹನದ ಇಂಧನ ಸೇರಿದಂತೆ ಯಾವುದೇ ಹಣಕಾಸಿನ ನೆರವನ್ನು ಪಂಚಾಯತ್ ನಿಂದ ಕೋರುತ್ತಿಲ್ಲ ಎಂದು . ಕೋಡಿ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃಧ್ದಿ ಅಧಿಕಾರಿ ರವೀಂದ್ರ ಅವರು ತಿಳಿಸಿದ್ದಾರೆ.