ಬೆಂಗಳೂರು: ಹುಂಜಾ ದಿನ ಕೂಗುತ್ತಿರುವುದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ಕುರಿತಂತೆ ಪೊಲೀಸ್ ಇಲಾಖೆಗೆ ಟ್ವೀಟ್ ಮಾಡಿರುವ ಅವರು ಎದುರು ಮನೆಯವರು ಹುಂಜಾ ಮತ್ತು ಬಾತುಕೋಳಿ ಸಾಕುತ್ತಿದ್ದಾರೆ. ಅವುಗಳು ಪ್ರತಿದಿನ ಕೂಗುವುದರಿಂದ ನೆರೆಹೊರೆಯವರಿಗೆ ತೊಂದರೆಯಾಗುತ್ತಿದೆ. ನಮ್ಮ ಮನೆಯಲ್ಲಿರುವ ಎರಡು ವರ್ಷದ ಮಗು ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟ್ವಿಟ್ಟರ್ ಮೂಲಕ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.
ನೆಮೊ ಎಂಬ ಟ್ವಿಟ್ಟರ್ ಖಾತೆ ಮೂಲಕ ಹುಂಜಾ ಕೂಗುವ ವಿಡಿಯೋ ಹಂಚಿಕೊಂಡು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡ ಲಾಗಿದೆ. ನಗರದ ಜೆ.ಪಿ.ನಗರ 8ನೇ ಹಂತದಲ್ಲಿರುವ ವ್ಯಕ್ತಿಯಿಂದ ದೂರು ನೀಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಿ ಅಥವಾ ಹುಂಜಾ ಮತ್ತು ಕೋಳಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಎಂದು ಟ್ವೀಟ್ ಮಾಡಲಾಗಿದೆ.