ಮಂಗಳೂರು: ಆಧಾರ್ ಕಾರ್ಡ್, ರೇಷನ್ ಕಾರ್ಡ್, ಅಂಕಪಟ್ಟಿ ಸೇರಿದಂತೆ ವಿವಿಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಖದೀಮನೊಬ್ಬ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಮಂಗಳೂರಿನ ಬಿರ್ಕನಕಟ್ಟೆ, ಬಜ್ಜೋಡಿಯ ಇನ್ ಪ್ಯಾಂಟ್ ಮೇರಿ ಚರ್ಚ್ ಹತ್ತಿರದ ನಿವಾಸಿ ಬರ್ನಾಡ್ ರೋಶನ್ ಮೆಸ್ಕರೆನಸ್(41) ಬಂಧಿತ ಆರೋಪಿ. ಮಂಗಳೂರು ನಗರದ ಕಂಕನಾಡಿ – ಪಂಪ್ ವೆಲ್ ಹಳೆಯ ರಸ್ತೆಯ ವಿಶ್ವಾಸ್ ಕ್ರೌನ್ ಅಪಾರ್ಟ್ ಮೆಂಟ್ ನ ನೆಲಮಹಡಿಯ ಕೊಠಡಿಯಲ್ಲಿ ‘ಹೆಲ್ಪ್ ಲೈನ್ ಮಂಗಳೂರು’ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದ. ಈತ ಆಧಾರ್ ಕಾರ್ಡ್, ಪಡಿತರ ಚೀಟಿ(ರೇಶನ್ ಕಾರ್ಡ್), ಅಂಕಪಟ್ಟಿ ಪತ್ರ, ಜನನ ಪ್ರಮಾಣ ಪತ್ರ ಇತ್ಯಾದಿ ಸೇರಿದಂತೆ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸುತ್ತಿದ್ದ. ಅವುಗಳನ್ನು ಬಳಸಿಕೊಂಡು ಇತರೇ ದಾಖಲಾತಿಗಳನ್ನು ಮಾಡಿಕೊಡುತ್ತಿದ್ದ. ಅವುಗಳನ್ನು ನೈಜ ದಾಖಲಾತಿಗಳೆಂದು ನಂಬಿಸಿ ಸಾರ್ವಜನಿಕರಿಗೆ ಹಾಗೂ ಸರಕಾರಕ್ಕೆ ವಂಚಿಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯನ್ವಯ ಮಂಗಳೂರು ಸಿಸಿಬಿ ಪೊಲೀಸರು ಆತನ ಸಂಸ್ಥೆಗೆ ದಾಳಿ ನಡೆಸಿದ್ದಾರೆ. ಆರೋಪಿ ಬರ್ನಾಡ್ ರೋಶನ್ ಮೆಸ್ಕರೆನಸ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಆತನಲ್ಲಿದ್ದ ನಕಲಿ ದಾಖಲೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಅಲ್ಲದೆ ನಕಲಿ ಪ್ರಮಾಣ ಪತ್ರಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದ ಲ್ಯಾಪ್ ಟಾಪ್, ಕಲರ್ ಪ್ರಿಂಟರ್, ಲ್ಯಾಮಿನೇಟರ್ ಮೆಶಿನ್, ಬಯೋ ಮೆಟ್ರಿಕ್ ಡಿವೈಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ನಕಲಿ ದಾಖಲೆ ಪತ್ರ ತಯಾರಿಸುವ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಅವರುಗಳ ಪತ್ತೆ ಕಾರ್ಯ ಮುಂದುವರಿದಿದೆ.
©2021 Tulunada Surya | Developed by CuriousLabs