ಮಂಗಳೂರು : ಡಾಕ್ಟರ್ಗಳು ರೋಗಿಗಳ ಚಿಕಿತ್ಸೆ ಅಥವಾ ಕುಟುಂಬದ ಕಡೆ ಗಮನ ಕೊಡುವುದನ್ನು ಬಿಟ್ಟು ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆ. ಅದರಲ್ಲೂ ಮಹಿಳಾ ವೈದ್ಯರಿಗಂತೂ ರೋಗಿಗಳಿಗೆ ಮತ್ತು ಕುಟುಂಬಕ್ಕೆ ಸಮಯ ಕೊಡುವುದರಲ್ಲಿಯೇ ಟೈಮ್ ಕಳೆದುಹೋಗುತ್ತದೆ. ಇಂತಹ ಬ್ಯುಸಿ ಶೆಡ್ಯೂಲ್ ಹೊಂದಿರುವ ಮಹಿಳಾ ವೈದ್ಯರು ಫ್ಯಾಷನ್ ಶೋನಲ್ಲಿ ಭಾಗವಹಿಸಿ ಕ್ಯಾಟ್ವಾಕ್ ಮೂಲಕ ಗಮನ ಸೆಳೆದರು.
ಮಂಗಳೂರಿನ ಐಎಂಎ ಸಭಾಂಗಣದಲ್ಲಿ ಮಹಿಳಾ ವೈದ್ಯರ ಫ್ಯಾಷನ್ ಶೋ ಆಯೋಜಿಸಲಾಗಿತ್ತು. ಮಂಗಳೂರಿನ ಪಾತ್ ವೇ ಎಂಟರ್ ಪ್ರೈಸಸ್ ಹಾಗೂ ವಿಮೆನ್ ಡಾಕ್ಟರ್ ವಿಂಗ್ ಇದರ ಸಹಯೋಗದಲ್ಲಿ ಮೆಡಿಕ್ವೆಸ್ಟ್ ಹೆಲ್ತ್ ಕೇರ್ ಪ್ರಾಯೋಜಕತ್ವದಲ್ಲಿ ಡಾಕ್ಟರ್ ಫ್ಯಾಷನ್ ರ‌್ಯಾಂಪ್ 2023 ಅನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು. ವಿಮೆನ್ ಡಾಕ್ಟರ್ ವಿಂಗ್ನ ಅಧ್ಯಕ್ಷೆ ಡಾ. ಜೆಸ್ಸಿ ಅವರು ಇತ್ತೀಚೆಗೆ ನಡೆದಿದ್ದ ಫ್ಯಾಷನ್ ಶೋ ವೊಂದರಲ್ಲಿ ಕಿರೀಟ ಮುಡಿಗೇರಿಸಿದ್ದರು. ಈ ಉತ್ಸಾಹದಿಂದ ಅವರು ಮಂಗಳೂರಿನಲ್ಲಿ ಮಹಿಳಾ ವೈದ್ಯರುಗಳಿಗೆ ಫ್ಯಾಷನ್ ಶೋ ಆಯೋಜಿಸಲು ಮುಂದಾದರು. ಮಂಗಳೂರಿನಲ್ಲಿ ನಡೆದ ಈ ಫ್ಯಾಷನ್ ಶೋ ಕಾರ್ಯಕ್ರಮ ರಾಜ್ಯದಲ್ಲೇ ಮೊದಲ ಬಾರಿಗೆ ನಡೆದ ವೈದ್ಯರ ಫ್ಯಾಷನ್ ಶೋ ಆಗಿದ್ದು, ರಾಜ್ಯಮಟ್ಟದಲ್ಲಿ ಮತ್ತೆ ಸಮಾರಂಭ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ.
ಮಂಗಳೂರಿನಲ್ಲಿ ಭಾನುವಾರ ನಡೆದ ಡಾಕ್ಟರ್ ಫ್ಯಾಷನ್ ಶೋನಲ್ಲಿ 20 ಮಂದಿ ಮಹಿಳಾ ವೈದ್ಯರು ಭಾಗವಹಿಸಿದ್ದರು. 20 ರಿಂದ 40 ವಯಸ್ಸಿನೊಳಗಿನ, 40 ರಿಂದ 60 ವಯಸ್ಸಿನೊಳಗಿನ ಮತ್ತು 60 ವರ್ಷ ಮೇಲ್ಪಟ್ಟ ವಯಸ್ಸಿನ ವಿಭಾಗವನ್ನು ಮಾಡಲಾಗಿತ್ತು. 60 ವರ್ಷ ಮೇಲ್ಪಟ್ಟ ವಯಸ್ಸಿನ ವಿಭಾಗದಲ್ಲಿ 5 ಮಂದಿ ಪಾಲ್ಗೊಂಡಿದ್ದು, ಇದರಲ್ಲಿ 68 ವರ್ಷ ವಯಸ್ಸಿನ ಡಾ. ಚಿತ್ರಲೇಖಾ ಶ್ರೀಯಾನ್ (ಪ್ರಸೂತಿ ತಜ್ಞೆ) ಕಿರೀಟ ಮುಡಿಗೇರಿಸಿಕೊಂಡರು. 40 ರಿಂದ 60 ವರ್ಷ ವಯಸ್ಸಿನ ವಿಭಾಗದಲ್ಲಿ 3 ಮಂದಿ ಭಾಗವಹಿಸಿದ್ದು, ಫಾದರ್ ಮುಲ್ಲರ್ ಆಸ್ಪತ್ರೆಯ ಡಿಪಾರ್ಟ್ಮೆಂಟ್ ಅಫ್ ಮೆಡಿಸಿನ್ ಪ್ರೊಫೆಸರ್ ಹಾಗೂ ಮೇರಿಹಿಲ್ನ ಅತರ್ವ ಸ್ಪೆಷಾಲಿಟಿ ಕ್ಲಿನಿಕ್ನ ಡಾ. ಅರ್ಚನ ಭಟ್ ಕಿರೀಟ ಮುಡಿಗೇರಿಸಿಕೊಂಡರು. 20 ರಿಂದ 40 ವರ್ಷದ ವಯಸ್ಸಿನ ವಿಭಾಗದಲ್ಲಿ 12 ಮಂದಿ ಭಾಗವಹಿಸಿದ್ದು, ಎಜೆ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ನಿಶಿತಾ ಶೆಟ್ಟಿಯಾನ್ ಫರ್ನಾಂಡಿಸ್ ಕಿರೀಟ ಮುಡಿಗೇರಿಸಿಕೊಂಡರು. ಕಾರ್ಯಕ್ರಮದ ಬಗ್ಗೆ ಮಾತನಾಡಿದ ಆಯೋಜಕ ಪಾತ್ ವೇ ಎಂಟರ್ ಪ್ರೈಸಸ್ನ ದೀಪಕ್ ಗಂಗೂಲಿ “ವೈದ್ಯರುಗಳ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ ಎಂದು ನಿರೀಕ್ಷೆಯೆ ಮಾಡಿರಲಿಲ್ಲ. 20 ಮಂದಿ ವೈದ್ಯರುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 60 ವರ್ಷ ಮೇಲ್ಪಟ್ಟ ವಿಭಾಗದಲ್ಲಿ 5 ಮಂದಿ ಭಾಗವಹಿಸಿರುವುದೇ ವಿಶೇಷ. ವಿಮೆನ್ ಡಾಕ್ಟರ್ ವಿಂಗ್ ನಿಂದ ಡಾಕ್ಟರ್ ಫ್ಯಾಷನ್ ಶೋವನ್ನು ರಾಜ್ಯ ಮಟ್ಟದಲ್ಲಿ ಆಯೋಜಿಸಲು ಬೇಡಿಕೆ ಬಂದಿದೆ” ಎಂದರು.
20 ರಿಂದ 40 ವರ್ಷದ ವಿಭಾಗದಲ್ಲಿ ಕಿರೀಟ ಮುಡಿಗೇರಿಸಿಕೊಂಡ ಡಾ. ನಿಶಿತಾ ಶೆಟ್ಟಿಯಾನ್ ಫರ್ನಾಂಡಿಸ್ ಮಾತನಾಡಿ, “ಕಿರೀಟ ಗೆದ್ದಿರುವುದು ತುಂಬಾ ಸಂತಸ ನೀಡಿದೆ. ರ‌್ಯಾಂಪ್ ವಾಕ್ ಮಾಡಿ ಗೆಲ್ಲುತ್ತೇನೆ ಎಂದು ಆಲೋಚಿಸಿರಲಿಲ್ಲ. ಫ್ಯಾಷನ್ ರ್ಯಾಂಪ್ನಲ್ಲಿ ಭಾಗವಹಿಸಬೇಕೆಂಬುದು ನನ್ನ ಕನಸಾಗಿತ್ತು. ಡಾಕ್ಟರ್ ಆದ ನಂತರ ಕೆಲಸ, ಕುಟುಂಬ ಎಂದು ಸಮಯ ಸಿಕ್ಕಿರಲಿಲ್ಲ. ಈ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಈ ಹಿಂದೆ ಯಾವತ್ತೂ ಫ್ಯಾಷನ್ ಶೋನಲ್ಲಿ ಭಾಗಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಭಾಗವಹಿಸಿ ಕಿರೀಟ ಗೆದ್ದೆ ಎಂದು ಸಂತಸ ವ್ಯಕ್ತಪಡಿಸಿದರು. 40 ರಿಂದ 60 ವರ್ಷ ವಯಸ್ಸಿನ ವಿಭಾಗದಲ್ಲಿ ಕಿರೀಟ ಗೆದ್ದ ಡಾ. ಅರ್ಚನ ಭಟ್ ಮಾತನಾಡಿ, “ನನಗೆ ತುಂಬಾ ಖುಷಿಯಾಗಿದೆ. ಕಷ್ಟವಾದ ಸ್ಪರ್ಧೆಯಲ್ಲಿ ಗೆದ್ದು ಬಂದಿದ್ದೇನೆ. ಇಂತಹ ಒಂದು ಅವಕಾಶ ವೈದ್ಯರುಗಳಿಗೆ ಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ನಮ್ಮ ಕೆಲಸ ಬದಿಗಿರಿಸಿ ಫ್ಯಾಷನ್ ಶೋದಲ್ಲಿ ಭಾಗವಹಿಸಿದಾಗ ಸಿಗುವ ಸಂಭ್ರಮವೇ ಬೇರೆ. ಇದೊಂದು ನಮ್ಮನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗಿದೆ ಎಂದರು.