ಮಂಗಳೂರು: ಸಂಸ್ಥೆಯೊಂದರ ಮೆಗಾ ಡ್ರಾದಲ್ಲಿ ಕಾರು ಬಹುಮಾನ ದೊರೆತಿದೆ ಎಂದು ನಂಬಿಸಿ ಹಂತಹಂತವಾಗಿ 90,400 ರೂ. ವಂಚಿಸಿದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
2023ರ ಮೇ ಅಂತ್ಯದಲ್ಲಿ ದೀಪಕ್ ಪಾಂಡೆ ಎಂಬ ವ್ಯಕ್ತಿ ತನ್ನ ಮೊಬೈಲ್‌ಗೆ ಕರೆ ಮಾಡಿ ‘ಆಯುರ್ವೇದ ಸಂಸ್ಥಾನ’ವೊಂದರಿಂದ ಕರೆ ಮಾಡುತ್ತಿದ್ದು, ಭಾರತದಾದ್ಯಂತ ಶಾಖೆ ಹೊಂದಿದೆ.
ನಮ್ಮ ಸಂಸ್ಥೆಯ ಮೆಗಾ ಡ್ರಾದ ಕೂಪನ್ ಕಳುಹಿಸುವುದಾಗಿ ತಿಳಿಸಿದ್ದ. ಅದರಂತೆ ಜೂ.10ರಂದು ತನಗೆ ಕೂಪನ್ ಬಂದಿದ್ದು, ಅದರಲ್ಲಿ ಸ್ಕ್ರಾಚ್ ಕಾರ್ಡ್ ಮತ್ತು ಹೆಲ್ಪ್‌ಲೈನ್ ನಂಬರ್ ಇತ್ತು. ತಾನು ಸ್ಕ್ರಾಚ್ ಮಾಡಿ ನೋಡಿದಾಗ 14,99,000 ರೂ. ಮೌಲ್ಯದ ಕಾರು ಬಹುಮಾನ ಬಂದಿರುವುದಾಗಿ ಸಂದೇಶವಿತ್ತು.
ಅದರಂತೆ ತಾನು ಹೆಲ್ಪ್‌ಲೈನ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಪಂಕಜ್‌ಸಿಂಗ್ ಭದೂರಿಯಾ ಎಂಬಾತ ಮೊದಲನೆ ಬಹುಮಾನ ಕಾರು ಗೆದ್ದಿರುವ ಬಗ್ಗೆ ಮಾಹಿತಿ ನೀಡಿದ್ದ. ಕಾರು ಪಡೆಯಲು ನಾನಾ ವಿಧದಲ್ಲಿ ಹಂತ ಹಂತವಾಗಿ 90,400 ರೂ. ಆತನ ಖಾತೆಗೆ ವರ್ಗಾಯಿಸಿದ್ದಾನೆ. ಬಳಿಕ ತಾನು ಮೋಸ ಹೋಗಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಫಿರ್ಯಾದಿದಾರರು ದೂರಿನಲ್ಲಿ ತಿಳಿಸಿದ್ದಾರೆ.