ಮಂಗಳೂರು: ಕಾರೊಂದು ಸ್ಕೂಟರ್ ಗೆ ಢಿಕ್ಕಿಯಾದ ಪರಿಣಾಮ ವೃದ್ಧ ದಂಪತಿ ಗಂಭೀರವಾಗಿ ಗಾಯಗೊಂಡ ಘಟನೆ ಕದ್ರಿ ಕೆಪಿಟಿಯ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ. ಕದ್ರಿ ಕಂಬಳ ನಿವಾಸಿಗಳಾದ ಸೂರ್ಯನಾರಾಯಣ ರಾವ್ (65) ಮತ್ತು ಸವಿತಾ (61) ಗಂಭೀರ ಗಾಯಗೊಂಡ ವೃದ್ಧ ದಂಪತಿ. ದಂಪತಿ ಸ್ಕೂಟರಿನಲ್ಲಿ ಕದ್ರಿ ಕೆಪಿಟಿ ವೃತ್ತದಿಂದ ಆಗಮಿಸಿ ಮುಂದೆ ಬಂದು ಹೆದ್ದಾರಿಯಲ್ಲಿ ಎಸ್ ಕೆಎಸ್ ಪ್ಲಾನೆಟ್ ಅಪಾರ್ಟೆಂಟ್ ಎದುರಲ್ಲಿ ಯು ಟರ್ನ್ ಹೊಡೆದಿದ್ದಾರೆ. ಈ ವೇಳೆ, ಕೊಟ್ಟಾರ ಕಡೆಯಿಂದ ವೇಗವಾಗಿ ಬರುತ್ತಿದ್ದ ಈಕೋ ಕಾರು ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರಿನಲ್ಲಿದ್ದ ದಂಪತಿ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ನೆಲಕ್ಕೆ ಬಿದ್ದ ಸೂರ್ಯನಾರಾಯಣ ರಾವ್ ಅವರ ತಲೆಗೆ ಗಂಭೀರವಾದ ಗಾಯವಾಗಿದೆ. ಸವಿತಾ ಅವರ ಕೈಕಾಲುಗಳಿಗೆ ಏಟು ಬಿದ್ದಿದ್ದು ಇಬ್ಬರನ್ನು ತಕ್ಷಣ ಸ್ಥಳೀಯರು ಎಜೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕದ್ರಿ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡಿದ್ದಾರೆ.
©2021 Tulunada Surya | Developed by CuriousLabs