ನೆಲ್ಯಾಡಿ: ವಾಹನ ಅಪಘಾತ ವಾಗಿ ಗಾಯಾಳು ಒಳರೋಗಿಯಾಗಿ ದಾಖಲೆಗೊಂಡು ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದರೂ ಹೇಳಿಕೆ ಪಡೆಯಲು ವಿಳಂಭವಾಗಿದೆಯೆಂದು ಕೊಣಾಲು ಗ್ರಾಮದ ಪಾಂಡಿಬೆಟ್ಟುವಿನ ಎಂ.ಜೆ ಅಬ್ರಹಾಂ ಎಂಬವರು ಪುತ್ತೂರು ಉಪ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಉಪ್ಪಿನಂಗಡಿ ಎಸ್.ಐ ಗೆ ಮನವಿ ರೂಪದಲ್ಲಿ ದೂರು ಸಲ್ಲಿಸಿದ್ದಾರೆ.
ಸೆಪ್ಟಂಬರ್ 23ರಂದು ಉಪ್ಪಿನಂಗಡಿ ಕಡೆಯಿಂದ ಆರ್ಲ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅಚಾನಕ್ಕಾಗಿ ಒಂದು ನಾಯಿ ಅಡ್ಡ ಬಂದ ಕಾರಣ ತಕ್ಷಣ ಬ್ರೇಕ್ ಹಾಕಿದಾಗ ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನವೊಂದು ಡಿಕ್ಕಿಯಾಗಿದೆ. ಇದರ ಪರಿಣಾಮ ತನ್ನ ಕಾಲಿನ ಮೂಳೆ ಮುರಿತಕ್ಕೊಳಗಾಗಿ ಸ್ಥಳೀಯ ವ್ಯಕ್ತಿಗಳ ಸಹಾಯದಿಂದ ನೆಲ್ಯಾಡಿ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿಗಳ ಮೂಲಕ ಅದೇ ದಿನ ಉಳ್ಳಾಲ ಪೋಲಿಸ್ ಠಾಣೆಗೆ ವಾಹನ ಅಪಘಾತದ ಮಾಹಿತಿ ನೀಡಲು ಕೋರಿದ್ದು ಆಸ್ಪತ್ರೆ ಸಿಬ್ಬಂದಿಗಳು ಠಾಣೆಗೆ ಮಾಹಿತಿ ನೀಡಿದರೂ ಇದೂವರೇಗೆ ನನ್ನ ಹೇಳಿಕೆ ಪಡೆಯಲು ಪೋಲಿಸ್ ಇಲಾಖೆಯಿಂದ ನನ್ನನ್ನು ಸಂಪರ್ಕಿಸಿರುವುದಿಲ್ಲ . 10 ದಿನಗಳ ಚಿಕಿತ್ಸೆ ಪಡೆದು ವೈದ್ಯರ ಸಲಹೆ ಮೇರೆಗೆ ನ.3 ರಂದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ನನ್ನ ಹೇಳಿಕೆಯನ್ನು ಪಡೆದು ಪ್ರತ್ಯಕ್ಷ ಸಾಕ್ಷಿಗಳ ಮುಖೇನ ಪ್ರಕರಣದ ಕೂಲಂಕುಷ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಿಕೊಡುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಅಪಘಾತವಾದ ನಂತರ ನೆಲ್ಯಾಡಿ ಹೊರ ಠಾಣೆ ಪೊಲೀಸರು ದ್ವಿಚ್ರವಾಹನವನ್ನು ಜಪ್ತಿ ಮಾಡಿ ನೆಲ್ಯಾಡಿ ಪೊಲೀಸ್ ಹೊರ ಠಾಣೆಯಲ್ಲಿ ಇರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.