ಬೆಂಗಳೂರು:ಬೆಂಗಳೂರು ಅರಮನೆ ಮೈದಾನದಲ್ಲಿ ಇಂದು ನಾಳೆ ಐತಿಹಾಸಿಕ ಕಂಬಳ ಪಂದ್ಯ ನಡೆಯಲಿದೆ. ಇಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಬೆಳಗ್ಗೆ 10.30ಕ್ಕೆ ಐತಿಹಾಸಿಕ ಕಂಬಳದ ಜೋಡು ಕರೆ ಉದ್ಘಾಟನೆ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂಜೆ 6 ಗಂಟೆಗೆ ಕಂಬಳ ಉದ್ಘಾಟನೆ ಮಾಡಲಿದ್ದಾರೆ.
ಅರಮನೆ ಮೈದಾನದ ಗೇಟ್ ನಂ.1, 2, 3, 4ರಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರಲಿದೆ. ಕಂಬಳ ವೀಕ್ಷಿಸಲು ಬರುವ ವಿವಿಐಪಿಗಳಿಗೆ ಪ್ರತ್ಯೇಕವಾಗಿ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಮೊದಲ ಕಂಬಳ ತುಳುನಾಡಿನ ಕಂಬಳದ ಇತಿಹಾಸದಲ್ಲಿಯೇ ಅತಿ ಉದ್ದದ ಟ್ರ್ಯಾಕ್ ಹೊಂದಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಸಾಂಪ್ರದಾಯಿಕ ಟ್ರ್ಯಾಕ್ 145 ಮೀಟರ್ ಉದ್ದವಿದೆ. 147 ಮೀಟರ್ ಉದ್ದದ ಟ್ರ್ಯಾಕ್ ಹೊಂದಿರುವ ಕಂಬಳವನ್ನು ಹಿಂದೆ ನಡೆಸಲಾಗಿತ್ತು ಎಂದು ಅವರು ಹೇಳಿದರು.
ವಿಜೇತರಿಗೆ ಬಹುಮಾನ ಎಷ್ಟು ?
ಬೆಂಗಳೂರು ಕಂಬಳದಲ್ಲಿ ವಿಜೇತರಾಗುವ ಕೋಣದ ಮಾಲೀಕರಿಗೆ 1 ಲಕ್ಷ ರೂ. ನಗದು, 16 ಗ್ರಾಂ ಬಂಗಾರ ಕೊಡಲಾಗುತ್ತದೆ. ದ್ವಿತೀಯ ಸ್ಥಾನ ಗಳಿಸಿದವರಿಗೆ 50,000 ರೂ. ಜೊತೆಗೆ 2.8 ಗ್ರಾಂ ಚಿನ್ನ ಮತ್ತು ತೃತೀಯ ಸ್ಥಾನ ಪಡೆದವರಿಗೆ 25,000 ರೂ. ನಗದು ಹಾಗೂ 4 ಗ್ರಾಂ ಬಂಗಾರದ ಪದಕವನ್ನು ಬಹುಮಾನವಾಗಿ ನೀಡಲಾಗುತ್ತದೆ.
“ಬೆಂಗಳೂರಿನಲ್ಲಿ ನಡೆಯುವ ಕಂಬಳ ಕಾರ್ಯಕ್ರಮವು ಎಲ್ಲ ರೀತಿಯಲ್ಲೂ ವಿಶೇಷವಾಗಿರಬೇಕು, ಆದ್ದರಿಂದ ನಾವು ಹಲವಾರು ದಾಖಲೆಗಳನ್ನು ಮುರಿಯಲು ಉದ್ದೇಶಿಸಿದ್ದೇವೆ. ಕೋಣಗಳ ಸಾಗಣೆಗೆ ತಗಲುವ ವೆಚ್ಚಕ್ಕಾಗಿ ಕಂಬಳ ಮಾಲೀಕರಿಗೆ 50,000 ರೂ.
ಕೊಡಲಾಗುತ್ತದೆ.”ಎಂದು ಶಾಸಕ ಅಶೋಕ್ ರೈ ಹೇಳಿದರು.
” ಕಂಬಳಕ್ಕೆ ಏಳರಿಂದ ಎಂಟು ಲಕ್ಷ ಪ್ರೇಕ್ಷಕರು ಆಗಮಿಸುವ ಸಾಧ್ಯತೆಯಿದೆ ಎಂದು ಪೊಲೀಸರು ನಿರೀಕ್ಷಿಸುತ್ತಿದ್ದಾರೆ” ಎಂದು ರೈ ಹೇಳಿದರು. ಕಂಬಳ ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಲು ಜನರು ಕುತೂಹಲದಿಂದ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.
“ಬೆಂಗಳೂರು ಕಂಬಳಕ್ಕೆ 116 ಜೋಡಿ ಎಮ್ಮೆಗಳ ಮಾಲೀಕರು ನೋಂದಾಯಿಸಿಕೊಂಡಿದ್ದಾರೆ. ನಾವು ಅದನ್ನು 125 ಜೋಡಿ ಎಮ್ಮೆಗಳಿಗೆ ಸೀಮಿತಗೊಳಿಸುತ್ತೇವೆ. ಕಾಂತಾರ ನಂತರ, ಕಂಬಳ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ” ಎಂದು ಅವರು ಹೇಳಿದರು.
ಆರಂಭದಲ್ಲಿ ಕಂಬಳದ ಎಮ್ಮೆ ಮಾಲೀಕರಿಗೆ ತಲಾ 15 ಪಾಸ್ ನೀಡಲು ನಿರ್ಧರಿಸಿದ್ದೆವು. ಈಗ ತಲಾ 25 ಪಾಸ್ ನೀಡುವಂತೆ ಬೇಡಿಕೆ ಇಟ್ಟಿದ್ದು, ದಿನಕ್ಕೆ 5 ಸಾವಿರ ಜನರಿಗೆ ಊಟ ನೀಡಲಾಗುವುದು ಎಂದು ಶಾಸಕರು ತಿಳಿಸಿದರು. ನಟರಾದ ಸುನೀಲ್ ಶೆಟ್ಟಿ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ ಮತ್ತು ಯಶ್, ದರ್ಶನ್ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಕಂಬಳ ವೀಕ್ಷಿಸಲಿದ್ದಾರೆ.