ಶಬರಿಮಲೆ ಯಾತ್ರಾರ್ಥಿಗಳಿಗೆ ಈಗ ಸನ್ನಿಧಾನಂ ಯಾತ್ರೆಗೆ ಸೂಕ್ತ ಆಪ್ ಲಭ್ಯವಾಗಲಿದೆ. 2023-24ನೇ ಸಾಲಿನ ‘ಮಂಡಲ ಮಕರವಿಳಕ್ಕು ಉತ್ಸವ’ದ ಅಂಗವಾಗಿ ಯಾತ್ರಾರ್ಥಿಗಳಿಗೆ ನೆರವಾಗಲು ಅರಣ್ಯ ಇಲಾಖೆ ‘Ayyan’ ಎಂಬ ಮೊಬೈಲ್ ಆಯಪ್ ಬಿಡುಗಡೆ ಮಾಡಿದೆ.
ಪೆರಿಯಾರ್ ಟೈಗರ್ ರಿಸರ್ವ್ ವೆಸ್ಟ್ ವಿಭಾಗದ ನೇತೃತ್ವದಲ್ಲಿ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಶಬರಿಮಲೆಗೆ ಭೇಟಿ ನೀಡುವ ಭಕ್ತರಿಗೆ ಲಭ್ಯವಿರುವ ವಿವಿಧ ಸೇವೆಗಳ ಬಗ್ಗೆ ಅಪ್ಲಿಕೇಶನ್ ಮಾಹಿತಿಯನ್ನು ಒದಗಿಸುತ್ತದೆ. ಪಂಪಾ, ಸನ್ನಿಧಾನಂ, ಸ್ವಾಮಿ ಅಯ್ಯಪ್ಪನ್ ರಸ್ತೆ, ಪಂಪಾ-ನೀಲಿಮಲ-ಸನ್ನಿಧಾನಂ, ಎರುಮೇಲಿ-ಅಳುತ ಕಡವು-ಪಂಪಾ, ಸತ್ರಂ-ಉಪ್ಪುಪಾರ-ಸನ್ನಿಧಾನಂ ಮಾರ್ಗಗಳಲ್ಲಿ ಲಭ್ಯವಿರುವ ಸೇವೆಗಳನ್ನು ಈ ಆಯಪ್ ಮೂಲಕ ತಿಳಿಯಬಹುದಾಗಿದೆ.
ಗೂಗಲ್ ಪ್ಲೇ ಸ್ಟೋರ್‌ನಿಂದ ಇನ್‌ಸ್ಟಾಲ್ ಮಾಡಬಹುದಾದ ‘ಅಯ್ಯನ್’ ಅಪ್ಲಿಕೇಶನ್ ಮಲಯಾಳಂ, ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಈ ಐದು ಭಾಷೆಗಳಲ್ಲಿ ಲಭ್ಯವಿದೆ. ಕಾನನ ಪಥದ ಗೇಟ್‌ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು.
ಯಾತ್ರಾರ್ಥಿಗಳು ಅನುಸರಿಸಬೇಕಾದ ಸಾಮಾನ್ಯ ಮಾರ್ಗಸೂಚಿಗಳು, ಪೆರಿಯಾರ್ ವನ್ಯಜೀವಿ ಅಭಯಾರಣ್ಯದ ಬಗ್ಗೆ ಮಾಹಿತಿ ಮತ್ತು ಶಬರಿಮಲೆ ದೇವಸ್ಥಾನದ ಬಗ್ಗೆ ಮಾಹಿತಿಯು ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ತುರ್ತು ಸಂಖ್ಯೆಗಳನ್ನು ಸಹ ಸೇರಿಸಲಾಗಿದೆ. ಅರಣ್ಯ ಮಾರ್ಗದ ಹಲವೆಡೆ ಇಂಟರ್ ನೆಟ್ ಸೇವೆಯಾಗಲಿ, ಫೋನ್ ಸಿಗ್ನಲ್ ಆಗಲಿ ಇಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ‘ಅಯ್ಯನ್’ ಆಪ್ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಯಾತ್ರಾರ್ಥಿಗಳಿಗೆ ಅವರ ಆಯ್ದ ಮಾರ್ಗಗಳ ಆಧಾರದ ಮೇಲೆ ವಿವಿಧ ಎಚ್ಚರಿಕೆಗಳನ್ನು ಸಹ ಕಳುಹಿಸಲಾಗುತ್ತದೆ.